ಖ್ಯಾತ ಹಿನ್ನೆಲೆ ಗಾಯಕಿ, ದಕ್ಷಿಣ ಭಾರತದ ‘ನೈಟಿಂಗೇಲ್’ ಎಂದೇ ಖ್ಯಾತರಾದ ಎಸ್. ಜಾನಕಿ (88) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕ ಅಪರೂಪದ ಪ್ರತಿಭೆಯನ್ನು ಕಳೆದುಕೊಂಡಿದ್ದು, ಅಭಿಮಾನಿಗಳು ಹಾಗೂ ಸಂಗೀತಾಸಕ್ತರಲ್ಲಿ ತೀವ್ರ ದುಃಖ ಮನೆಮಾಡಿದೆ.
ಆರು ದಶಕಗಳಿಗೂ ಅಧಿಕ ಕಾಲದ ತಮ್ಮ ಅದ್ಭುತ ಸಂಗೀತ ಪಯಣದಲ್ಲಿ ಎಸ್. ಜಾನಕಿ ಅವರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳಿಗೆ ಧ್ವನಿಯಾಗಿದ್ದರು. ಭಾವಪೂರ್ಣ ಗಾಯನ ಮತ್ತು ವಿಶಿಷ್ಟ ಕಂಠಸಿರಿಯಿಂದ ಅವರು ಭಾರತೀಯ ಸಂಗೀತ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿ, “ಎಸ್. ಜಾನಕಿ ಅಮ್ಮ ಅವರ ನಿಧನವು ಸಂಗೀತ ಮತ್ತು ಸಂಸ್ಕೃತಿ ಜಗತ್ತಿಗೆ ಭರಿಸಲಾಗದ ನಷ್ಟವಾಗಿದೆ. ವಿವಿಧ ಭಾಷೆಗಳಲ್ಲಿ ಅವರ ಹಾಡುಗಳು ತಲೆಮಾರುಗಳಿಂದ ಜನಪ್ರಿಯವಾಗಿದ್ದು, ಪ್ರತಿಯೊಂದು ಭಾವನೆಗೂ ಅವರು ತಮ್ಮ ಧ್ವನಿಯ ಮೂಲಕ ಜೀವ ತುಂಬಿದರು. ಅವರ ಮಧುರ ಗೀತೆಗಳು ಮುಂದಿನ ಪೀಳಿಗೆಗಳನ್ನೂ ಸದಾ ರಂಜಿಸುತ್ತವೆ. ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬದವರಿಗೆ, ಅಭಿಮಾನಿಗಳಿಗೆ ಹಾಗೂ ಸಂಗೀತ ಬಂಧುಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು. ಓಂ ಶಾಂತಿ.” ಎಂದು ಹೇಳಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಹ ತಮ್ಮ ಸಂತಾಪ ಸಂದೇಶದಲ್ಲಿ, “ಎಸ್. ಜಾನಕಿ ಅಮ್ಮ ಅವರ ನಿಧನದಿಂದ ಭಾರತವು ಒಬ್ಬ ಮಹಾನ್ ಸಂಗೀತ ದಿಗ್ಗಜರನ್ನು ಕಳೆದುಕೊಂಡಿದೆ. ಆರು ದಶಕಗಳಿಗೂ ಹೆಚ್ಚು ಕಾಲದ ಅವರ ಸಂಗೀತ ಪಯಣದಲ್ಲಿ ಸುಮಾರು 20 ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ದಾಖಲಿಸಿ ಕೋಟ್ಯಂತರ ಹೃದಯಗಳನ್ನು ಗೆದ್ದಿದ್ದಾರೆ. ಅವರ ಕಾಲಾತೀತ ಗಾಯನ ಸದಾ ಭಾರತೀಯ ಸಂಗೀತದ ಅಮೂಲ್ಯ ಪರಂಪರೆಯಾಗಿ ಉಳಿಯಲಿದೆ. ಅವರ ಕುಟುಂಬದವರಿಗೆ ಹಾಗೂ ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಹೃತ್ಪೂರ್ವಕ ಸಂತಾಪಗಳು.” ಎಂದು ತಿಳಿಸಿದ್ದಾರೆ.














