ಬೆಂಗಳೂರು, ಜುಲೈ 10: ಇಂದು ಬೆಂಗಳೂರಿನ ನೆಹರೂ ತಾರಾಲಯದ ಆವರಣದಲ್ಲಿರುವ ಪ್ರೊ.ಯು.ಆರ್.ರಾವ್ ಭವನದ ಶ್ರೀ ಸಿ.ವಿ.ವಿಶ್ವೇಶ್ವರ ಸಭಾಂಗಣದಲ್ಲಿ, ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಪಾರ್ಟ್‌ಮೆಂಟ್ ಮಾಲೀಕರು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು (RWAs) ಹಾಗೂ ಇತರ ಪಾಲುದಾರರೊಂದಿಗೆ ಮಹತ್ವದ ಸಮಾಲೋಚನಾ ಸಭೆ ನಡೆಯಿತು.
‘ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ’ ಕುರಿತು ನಡೆದ ಈ ಸಭೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಶ್ರೀ ಕೃಷ್ಣ ಬೈರೇಗೌಡ, ಸಚಿವರಾದ ಶ್ರೀ ಕೆ.ಜೆ.ಜಾರ್ಜ್ ಹಾಗೂ ಶ್ರೀ ಬೈರತಿ ಸುರೇಶ್, ಕೆಪಿಸಿಸಿ ಅಧ್ಯಕ್ಷರು ಹಾಗೂ ಎಂ.ಎಲ್.ಸಿ ಶ್ರೀ ಬಿ.ಕೆ. ಹರಿಪ್ರಸಾದ್, ಬಿಡಿಎ ಅಧ್ಯಕ್ಷ ಶ್ರೀ ಎನ್.ಎ.ಹ್ಯಾರಿಸ್, ವಿವಿಧ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಬೆಂಗಳೂರಿನ ವಿವಿಧ ಅಪಾರ್ಟ್‌ಮೆಂಟ್ ಸಂಘಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಆಲಿಸಿ, ಸಾರ್ವಜನಿಕ ಸಮಾಲೋಚನೆಯ ಮೂಲಕ ಪ್ರಸ್ತಾವಿತ ವಿಧೇಯಕವನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಜನಪರವಾಗಿಸುವ ಕುರಿತು ಚರ್ಚಿಸಲಾಯಿತು. ನಿವಾಸಿಗಳ ಹಿತರಕ್ಷಣೆ, ಪಾರದರ್ಶಕ ನಿರ್ವಹಣೆ ಮತ್ತು ಅಪಾರ್ಟ್‌ಮೆಂಟ್ ಆಡಳಿತ ವ್ಯವಸ್ಥೆಯನ್ನು ಬಲಪಡಿಸುವ ಉದ್ದೇಶದಿಂದ ಈ ಸಮಾಲೋಚನೆ ಮಹತ್ವದ ಹೆಜ್ಜೆಯಾಗಿದೆ.














