ನವದೆಹಲಿ: ಸರ್ಕಾರಿ ಕಾರ್ಯಕ್ರಮಗಳಲ್ಲಿ ಮೊದಲು ನಾಡಗೀತೆಯನ್ನು ಹಾಡಬೇಕು ಎಂದು ಸೂಚಿಸಿ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಈ ಮಾರ್ಗಸೂಚಿಯ ಪ್ರಕಾರ, ಮೊದಲು ನಾಡಗೀತೆ (ಜಯ ಭಾರತ ಜನನಿಯ ತನುಜಾತೆ), ನಂತರ ರಾಷ್ಟ್ರಗೀತೆ (ವಂದೇ ಮಾತರಂ), ಕೊನೆಯಲ್ಲಿ ರಾಷ್ಟ್ರಗಾನ (ಜನ ಗಣ ಮನ) ಹಾಡಬೇಕು. ರಾಷ್ಟ್ರಗೀತೆ ಮತ್ತು ರಾಷ್ಟ್ರಗಾನವನ್ನು ಹಾಡುವಾಗ ಮೂಲ ಸಾಹಿತ್ಯ, ಸರಿಯಾದ ಉಚ್ಚಾರಣೆ ಹಾಗೂ ನಿಗದಿತ ವಿಧಾನವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸಚಿವಾಲಯ ತಿಳಿಸಿದೆ.
ಈ ಸಂಬಂಧ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಹಾಗೂ ಕೇಂದ್ರ ಸಚಿವಾಲಯಗಳಿಗೆ ಹೊಸ ಮಾರ್ಗಸೂಚಿಗಳನ್ನು ರವಾನಿಸಿದ್ದು, ಈ ಕ್ರಮವನ್ನು ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಿದೆ.
ರಾಷ್ಟ್ರಗಾನ ಅಥವಾ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕಾದ ಅಥವಾ ವಾದಿಸಬೇಕಾದ ಸಂದರ್ಭಗಳು ಹಾಗೂ ಐಚ್ಛಿಕವಾಗಿ ಹಾಡಬಹುದಾದ ಅಥವಾ ವಾದಿಸಬಹುದಾದ ಕಾರ್ಯಕ್ರಮಗಳ ಕುರಿತಾದ ವಿವರವಾದ ಪಟ್ಟಿಯನ್ನೂ ಈ ಮಾರ್ಗಸೂಚಿಯಲ್ಲಿ ಒಳಗೊಂಡಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ನಿಗದಿಪಡಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಸಂಸ್ಥೆಗಳು ಹಾಗೂ ಇಲಾಖೆಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಮತ್ತು ಕೇಂದ್ರ ಸಚಿವಾಲಯಗಳಿಗೆ ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದೆ.














