ಬೆಳಗಾವಿ, ಜು. 9: ಬೆಳಗಾವಿಯ ಸುವರ್ಣಸೌಧದಲ್ಲಿ ಗುರುವಾರ ನಡೆದ ಬೆಳಗಾವಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳ ಹುಂಡಿಗಳ ಭದ್ರತೆ ಮತ್ತು ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು.
ಸಭೆಯಲ್ಲಿ ಬೆಳಗಾವಿ ವಿಭಾಗದ ಎಲ್ಲಾ ಶಾಸಕರು, ಸಂಸದರು ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಉತ್ತರ ಕರ್ನಾಟಕ ಪ್ರವಾಸವನ್ನು ಬಸವಣ್ಣನ ನಾಡಾದ ಬಸವಕಲ್ಯಾಣದ ಅನುಭವ ಮಂಟಪದಿಂದ ಆರಂಭಿಸಿರುವುದಾಗಿ ತಿಳಿಸಿದ ಮುಖ್ಯಮಂತ್ರಿ, ಸಭೆಯಲ್ಲಿ ವಿವಿಧ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆದಿರುವುದಾಗಿ ಹೇಳಿದರು.
ಮುಜರಾಯಿ ದೇವಾಲಯಗಳಲ್ಲಿ ಭಕ್ತರು ಸಲ್ಲಿಸುವ ದೇಣಿಗೆಯ ದುರ್ಬಳಕೆ ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದ ಸಿಎಂ, “ರಾಮ ಮಂದಿರದ ದೇಣಿಗೆ ವಿಚಾರದಲ್ಲಿ ನಡೆದಿರುವ ಅಕ್ರಮವು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ಜನರು ಭಕ್ತಿಯಿಂದ ನೀಡಿದ ಕಾಣಿಕೆಯನ್ನು ಧರ್ಮದ ಹೆಸರಿನಲ್ಲಿ ದುರ್ಬಳಕೆ ಮಾಡಿರುವುದು ಖಂಡನೀಯ. ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯದ ಎಲ್ಲಾ ಮುಜರಾಯಿ ದೇವಾಲಯಗಳ ಮೇಲೆ ತೀವ್ರ ನಿಗಾ ವಹಿಸಲಾಗುವುದು” ಎಂದು ಹೇಳಿದರು.
ಇದಕ್ಕಾಗಿ ಮುಜರಾಯಿ ಇಲಾಖೆ ವ್ಯಾಪ್ತಿಯ ಎಲ್ಲಾ ದೇವಾಲಯಗಳಲ್ಲಿ ಹುಂಡಿಗಳ ಮುಂದೆ ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಹುಂಡಿ ತೆರೆಯುವ, ಹಣ ಹೊರತೆಗೆಯುವ ಹಾಗೂ ಹಣ ಎಣಿಸುವ ಸಂಪೂರ್ಣ ಪ್ರಕ್ರಿಯೆಯೂ ಸಿಸಿಟಿವಿ ಕಣ್ಗಾವಲಿನಲ್ಲಿ ನಡೆಯಲಿದ್ದು, ಆ ದೃಶ್ಯಾವಳಿಗಳು ಸಂಬಂಧಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಹಾಗೂ ಜಿಲ್ಲಾಧಿಕಾರಿ (ಉಪ ಆಯುಕ್ತ) ಕಚೇರಿಗೆ ನೇರವಾಗಿ ರವಾನೆಯಾಗುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಮುಖ್ಯಮಂತ್ರಿ ವಿವರಿಸಿದರು.
ಈ ಕ್ರಮದಿಂದ ದೇವಾಲಯಗಳ ದೇಣಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಭಕ್ತರ ವಿಶ್ವಾಸವನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು.














