ಚೆನ್ನೈ, ಜುಲೈ 10: ತಮಿಳುನಾಡಿನಲ್ಲಿ ಖಾಲಿ ಇರುವ ತಿರುಚ್ಚಿ ಪೂರ್ವ, ಪೆರುಂತುರೈ, ಅಂಬಾಸಮುತ್ತಿರಂ, ವಿರಾಲಿಮಲೈ ಹಾಗೂ ಕರೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮಾಡುವುದಕ್ಕೆ ಚೆನ್ನೈ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ವಿಜಯ್ ಅವರು ತಿರುಚ್ಚಿ ಪೂರ್ವ ಮತ್ತು ಪೆರಂಬೂರು ಕ್ಷೇತ್ರಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ ಅವರು ತಿರುಚ್ಚಿ ಪೂರ್ವ ಕ್ಷೇತ್ರದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೇ ವೇಳೆ ಎಐಎಡಿಎಂಕೆ ಶಾಸಕರಾದ ಜಯಕುಮಾರ್, ಮರಗದಂ ಕುಮಾರವೇಲ್, ಸತ್ಯಭಾಮ ಹಾಗೂ ಇಸಕ್ಕಿ ಸುಬ್ಬಯ್ಯ ಅವರ ರಾಜೀನಾಮೆಯಿಂದ ಒಟ್ಟು ಐದು ಕ್ಷೇತ್ರಗಳು ಖಾಲಿಯಾಗಿದ್ದವು.
ಈ ಹಿನ್ನೆಲೆಯಲ್ಲಿ ತಿರುಚ್ಚಿ ಪೂರ್ವ, ಪೆರುಂತುರೈ, ಅಂಬಾಸಮುತ್ತಿರಂ, ವಿರಾಲಿಮಲೈ ಮತ್ತು ಕರೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಬಾರದು ಎಂದು ಕೋರಿ ಚೆನ್ನೈ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸಂಬಂಧಿತ ಚುನಾವಣಾ ಫಲಿತಾಂಶಗಳ ವಿರುದ್ಧದ ಅರ್ಜಿಗಳು ಇನ್ನೂ ನ್ಯಾಯಾಲಯದಲ್ಲಿ ಬಾಕಿ ಇರುವ ಕಾರಣ, ಉಪಚುನಾವಣೆ ಪ್ರಕ್ರಿಯೆಗೆ ತಡೆ ನೀಡುವಂತೆ ಅರ್ಜಿದಾರರು ಮನವಿ ಮಾಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಧರ್ಮಾಧಿಕಾರಿ ಹಾಗೂ ನ್ಯಾಯಮೂರ್ತಿ ಅರುಳ್ ಮುರುಗನ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಐದು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಮತ್ತು ಪ್ರಕ್ರಿಯೆಗೆ ಮಧ್ಯಂತರ ತಡೆ ನೀಡಿದೆ.
ಜತೆಗೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ, ಮುಖ್ಯಮಂತ್ರಿ ವಿಜಯ್ ಹಾಗೂ ತಮಿಳುನಾಡು ವಿಧಾನಸಭೆಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡಿನ ಐದು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಮುಂದಿನ ನ್ಯಾಯಾಲಯದ ಆದೇಶದ ಮೇಲೆ ಚುನಾವಣೆ ವೇಳಾಪಟ್ಟಿ ನಿರ್ಧಾರವಾಗಲಿದೆ.














