ಬೆಂಗಳೂರು: ಇಸ್ಕಾನ್ ಸಂಸ್ಥೆಯ ವತಿಯಿಂದ ಇಂದು ಬೆಂಗಳೂರಿನ ಬಾಣಸವಾಡಿಯಲ್ಲಿ ಶ್ರೀ ಜಗನ್ನಾಥ ರಥಯಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು.
ಬಾಣಸವಾಡಿ ಗ್ರಾಮದಲ್ಲಿ ಶ್ರೀ ಜಗನ್ನಾಥ, ಬಲದೇವ ಹಾಗೂ ಸುಭದ್ರಾ ದೇವಿಯರ ಸುಂದರವಾಗಿ ಅಲಂಕರಿಸಲ್ಪಟ್ಟ ಮೂರು ಭವ್ಯ ರಥಗಳು ಭಕ್ತರ ದರ್ಶನಕ್ಕೆ ಸಾಗಿ ಬಂದವು. “ಹರಿನಾಮ ಸಂಕೀರ್ತನೆ” ಮತ್ತು ಭಗವಂತನ ಸ್ತುತಿಗಾನಗಳೊಂದಿಗೆ ಸಾವಿರಾರು ಭಕ್ತರು ಉತ್ಸಾಹದಿಂದ ರಥಗಳನ್ನು ಎಳೆದು ಭಕ್ತಿಭಾವ ಮೆರೆದರು. ರಥಯಾತ್ರೆ ಸಾಗಿದ ಮಾರ್ಗದುದ್ದಕ್ಕೂ ಭಕ್ತರಿಗೆ ಇಸ್ಕಾನ್ ವತಿಯಿಂದ ರುಚಿಕರವಾದ ಪ್ರಸಾದ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಇಸ್ಕಾನ್ ಸಂಸ್ಥೆಯ ಹಿರಿಯ ಸ್ವಾಮಿಗಳು, ಅಧ್ಯಕ್ಷರು ಹಾಗೂ ಗುರುಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ.ರಾಮಮೂರ್ತಿ ಅವರು ಶ್ರೀ ಜಗನ್ನಾಥ ರಥಯಾತ್ರೆಯ ಧಾರ್ಮಿಕ ಮಹತ್ವ ಮತ್ತು ವೈಭವವನ್ನು ವಿವರಿಸಿ, ಇಂತಹ ಭವ್ಯ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಇಸ್ಕಾನ್ ಸಂಸ್ಥೆಯನ್ನು ಶ್ಲಾಘಿಸಿದರು.

ವಿಶೇಷ ಆಹ್ವಾನಿತರಾಗಿ ಸಮಾಜಸೇವಕ, ಉದ್ಯಮಿ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಗಣೇಶ್ ರೆಡ್ಡಿ ಸೇರಿದಂತೆ ಬಾಣಸವಾಡಿಯ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ರಥಯಾತ್ರೆಯಲ್ಲಿ ಭಾಗವಹಿಸಿ ಧಾರ್ಮಿಕ ಉತ್ಸವಕ್ಕೆ ಮೆರುಗು ತಂದರು.














