ನವದೆಹಲಿ: ಅಯೋಧ್ಯೆ ರಾಮಮಂದಿರ ದೇಣಿಗೆ ಹಗರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಂಟಿಯಾಗಿ ಪತ್ರ ಬರೆದು ಸ್ವತಂತ್ರ ತನಿಖೆಗೆ ಒತ್ತಾಯಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪತ್ರದಲ್ಲಿ ರಾಮಮಂದಿರ ಟ್ರಸ್ಟ್‌ನ ಹಣಕಾಸು ವ್ಯವಹಾರಗಳ ಕುರಿತು ಗಂಭೀರ ಆರೋಪಗಳನ್ನು ಉಲ್ಲೇಖಿಸಿ, ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕೆಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ, “ರಾಮಮಂದಿರದಲ್ಲಿನ ಅಕ್ರಮಗಳ ಬಗ್ಗೆ ನಿಮಗೆ ತಿಳಿದಿದೆ. ತಮ್ಮ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸಂಪೂರ್ಣ ನಂಬಿಕೆ ಮತ್ತು ಭಕ್ತಿಯಿಂದ ದೇಣಿಗೆಯಾಗಿ ನೀಡಿದ ಭಕ್ತರು ಈ ಹಗರಣದಿಂದ ಮೋಸಹೋದಂತೆ ಭಾವಿಸುತ್ತಿದ್ದಾರೆ. ಟ್ರಸ್ಟ್‌ನ ಸದಸ್ಯರು ಆರ್‌ಎಸ್‌ಎಸ್, ವಿಎಚ್‌ಪಿ ಹಾಗೂ ಅದರ ಅಂಗಸಂಸ್ಥೆಗಳಿಗೆ ಸೇರಿದವರಾಗಿದ್ದಾರೆ ಎಂಬುದು ಸಾರ್ವಜನಿಕರಿಗೆ ತಿಳಿದಿರುವ ವಿಷಯ,” ಎಂದು ಉಲ್ಲೇಖಿಸಲಾಗಿದೆ.
ಇದಲ್ಲದೆ, ಪ್ರಕರಣದ ಕುರಿತು ಸ್ವತಂತ್ರ ತನಿಖೆಗೆ ಆದೇಶಿಸಬೇಕು, ರಾಮಮಂದಿರ ಟ್ರಸ್ಟ್‌ನ ಎಲ್ಲಾ ಹಣಕಾಸು ಖಾತೆಗಳನ್ನು ಸಾರ್ವಜನಿಕಗೊಳಿಸಬೇಕು ಹಾಗೂ ದೇಣಿಗೆ ನೀಡಿದ ಭಕ್ತರ ವಿಶ್ವಾಸಕ್ಕೆ ಧಕ್ಕೆ ತಂದಿರುವ ಈ ಪ್ರಕರಣದಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕೆಂದು ಅವರು ಒತ್ತಾಯಿಸಿದ್ದಾರೆ.
“ಇದು ಭಕ್ತರಿಗೆ ಮಾಡಿದ ದೊಡ್ಡ ದ್ರೋಹವಾಗಿದೆ. ಈ ಪ್ರಕರಣದಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಿ, ಸೂಕ್ತ ಕ್ರಮ ಕೈಗೊಳ್ಳುವುದು ನಿಮ್ಮ ಕರ್ತವ್ಯ. ಈ ಅಪರಾಧದಲ್ಲಿ ಯಾರೇ ಭಾಗಿಯಾಗಿದ್ದರೂ ಅವರ ಸ್ಥಾನಮಾನ ಅಥವಾ ಪ್ರಭಾವವನ್ನು ಲೆಕ್ಕಿಸದೆ ನ್ಯಾಯಾಂಗದ ಮುಂದೆ ತರಬೇಕು,” ಎಂದು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ತಮ್ಮ ಜಂಟಿ ಪತ್ರದಲ್ಲಿ ತಿಳಿಸಿದ್ದಾರೆ.














