ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಇಲ್ಲಿಯವರೆಗೆ ಸುಮಾರು ೫೦೦೦ ಕೋಟಿ ರೂಗಳ ವರೆಗೆ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಮಾತ್ರ ಸೂನ್ಯ. ಕ್ಷೇತ್ರವು ಹಲವು ವರ್ಷಗಳಿಂದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ. ಅಭಿವೃದ್ಧಿ ಕಾಣದ ರಸ್ತೆಗಳು, ಎಲ್ಲೆಂದರಲ್ಲಿ ಗುಂಡಿಗಳಿಂದ ಕೂಡಿದ ಮಾರ್ಗಗಳು, ಕೆರೆಗಳ ಸುತ್ತಮುತ್ತ ಕಸದ ರಾಶಿಗಳು, ಕುಡಿಯುವ ನೀರಿನ ಅಭಾವ ಇವೆಲ್ಲವು ಜನಜೀವನವನ್ನು ಕಷ್ಟಕರವಾಗಿಸಿದೆ.
ಮಾನ್ಯ ಸಂಸದರ, ಶಾಸಕರ ಅನುದಾನದಡಿಯಲ್ಲಿ ಮಾಡಿದ ಕಾಮಗಾರಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ.
2020 ರಿಂದ 2025 ರವರೆಗೆ ಹಿಂದಿನ ಹೊರಮಾವು, ಕಲ್ಕೆರೆ, ವಿಜಿನಾಪುರ ವಾರ್ಡ್ ಗಳಲ್ಲಿ ಬಿಬಿಎಂಪಿ ಮಾಡಿದ ವಾರ್ಡ್ ಮಟ್ಟದ ಕಾಮಗಾರಿಗಳು ಯಾವುದು? ಇದರ ಬಗ್ಗೆಯೂ ಮಾಹಿತಿಯಿಲ್ಲ. ಸಾಮಾಜಿಕ ಕಾರ್ಯಕರ್ತ ಅಗರ ಪ್ರಕಾಶ್ ಅವರಿಂದ ಇದುವರೆಗೆ ಒಟ್ಟು 73 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಕೋರಲಾಗಿದೆ. ಆದರೆ ಯಾರೂ ಮಾಹಿತಿ ಒದಗಿಸುತ್ತಿಲ್ಲ.
ಹಾಗಾಗಿ, 73 ಆರ್‌ಟಿಐ ಅರ್ಜಿಗಳಿಗೆ ಸಂಬಂಧಪಟ್ಟಂತೆ ಅಗರ ಪ್ರಕಾಶ್ ಅವರು ಕರ್ನಾಟಕ ಮಾಹಿತಿ ಆಯೋಗಕ್ಕೆ ದೂರು ಮತ್ತು ಮೇಲ್ಮನವಿ ಸಲ್ಲಿಸಿ ದಂಡ ಸಮೇತ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಲು ಪೂರ್ವವ ವಲಯದ ಪಾಲಿಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲು ಕೋರಿದ್ದಾರೆ.
ಅಗರ ಪ್ರಕಾಶ್ ಅವರೊಂದಿಗೆ ಹಿರಿಯ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ.ಸುರೇಶ್, ಹೊರಮಾವು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸಿ.ವೆಂಕಟೇಶ್, ಕಾಂಗ್ರೆಸ್ ಮುಖಂಡರಾದ ಆರ್.ಪುರುಶೋತ್ತಮ ಬಾಬು ಮತ್ತು ಪತ್ರಕರ್ತ ಡಿ.ಸಿ.ಪ್ರಕಾಶ್ ಉಪಸ್ಥಿತರಿದ್ದರು.














