ಭೋಪಾಲ್: ಬಿಜೆಪಿ ಕೌನ್ಸಿಲರ್ ಒಬ್ಬರ ಪತಿಯೇ ಮಹಿಳೆಯ ಮೇಲೆ ಚಾಕು ತೋರಿಸಿ ಅತ್ಯಾಚಾರ ಎಸಗಿ, ಆ ಕೃತ್ಯದ ವಿಡಿಯೋ ಮಾಡಿ ಬಳಿಕ ಅದನ್ನು ಆಧಾರವಿಟ್ಟು ಪದೇಪದೇ ಲೈಂಗಿಕ ಸಂಬಂಧಕ್ಕೆ ಬೆದರಿಕೆ ಹಾಕಿದ್ದಾನೆ ಎಂಬ ಗಂಭೀರ ಆರೋಪ ಬೆಳಕಿಗೆ ಬಂದಿದೆ.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ರಾಂಪುರ ಬಘೇಲನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಯ ಕಿರುಕುಳಕ್ಕೆ ಬೇಸತ್ತ ಸಂತ್ರಸ್ತ ಮಹಿಳೆ, ಆತನೊಂದಿಗೆ ನಡೆದ ಮಾತುಕತೆಯ ವಿಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾಳೆ. ವೈರಲ್ ಆದ ಆ ವಿಡಿಯೋದಲ್ಲಿ, ಆರೋಪಿಯು “ನನಗೆ ಏನೂ ಆಗಲ್ಲ, ನೀನು ಎಲ್ಲಿ ಬೇಕಾದರೂ ದೂರು ಕೊಡು” ಎಂದು ಅಹಂಕಾರದಿಂದ ಬೆದರಿಸುತ್ತಿರುವುದು ಕೇಳಿಬರುತ್ತದೆ. ಹಿನ್ನಲೆಯಲ್ಲಿ ಮಹಿಳೆ ಕಣ್ಣೀರಿಡುತ್ತಾ ದೂರು ನೀಡುವ ಬಗ್ಗೆ ಮಾತನಾಡುತ್ತಿರುವುದು ಸ್ಪಷ್ಟವಾಗಿ ಕೇಳಿಸುತ್ತದೆ.
ಅತ್ಯಾಚಾರ ಆರೋಪಿ ಅಶೋಕ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ರಾಂಪುರ ಬಘೇಲನ್ ನಗರ ಪರಿಷತ್ತಿನ ಬಿಜೆಪಿ ಕೌನ್ಸಿಲರ್‌ರ ಪತಿ ಎನ್ನಲಾಗಿದೆ. ಅಶೋಕ್ ಸಿಂಗ್ ಪೊಲೀಸ್ ಅಧಿಕಾರಿಗಳನ್ನು ನಿಂದಿಸುತ್ತಾ, ಸಂತ್ರಸ್ತೆಗೆ ಬೆದರಿಕೆ ಹಾಕುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.
ಸಂತ್ರಸ್ತ ಮಹಿಳೆಯ ಪ್ರಕಾರ, ಸುಮಾರು ಆರು ತಿಂಗಳ ಹಿಂದೆ ಅಶೋಕ್ ಸಿಂಗ್ ಆಕೆಯ ಮನೆಗೆ ನುಗ್ಗಿ ಚಾಕು ತೋರಿಸಿ ಅತ್ಯಾಚಾರ ಎಸಗಿದ್ದ. ಅಲ್ಲದೆ ಆ ಕೃತ್ಯವನ್ನು ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡು, ಅದನ್ನು ತೋರಿಸಿ ಮೌನವಾಗಿರಲು ಮತ್ತು ಪದೇಪದೇ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದ ಎಂದು ಆರೋಪಿಸಿದ್ದಾಳೆ.
ತನ್ನ ಜೀವ ಹಾಗೂ ಕುಟುಂಬದ ಭದ್ರತೆಗೆ ಭಯಪಟ್ಟು ಈವರೆಗೂ ಮೌನವಾಗಿದ್ದೆ ಎಂದು ಹೇಳಿದ ಮಹಿಳೆ, ಸೋಮವಾರ ಸತ್ನಾ ಪೊಲೀಸ್ ವರಿಷ್ಠಾಧಿಕಾರಿ ಹಂಸರಾಜ್ ಸಿಂಗ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾಳೆ. ದೂರು ಸ್ವೀಕರಿಸಿದ ಎಸ್‌ಪಿ ತಕ್ಷಣವೇ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ತ್ರಿವೇದಿ ಅವರಿಗೆ ವಹಿಸಿದ್ದಾರೆ.
ಮಹಿಳೆಯ ದೂರಿನಂತೆ, ಅಶೋಕ್ ಸಿಂಗ್‌ಗೆ ಅಪರಾಧ ಹಿನ್ನೆಲೆ ಇದ್ದು, ಈ ಹಿಂದೆ ಜಿಲ್ಲೆಯಿಂದ ಬಹಿಷ್ಕೃತನಾಗಿದ್ದ ಎನ್ನಲಾಗಿದೆ. ಆತ ನಿಯಮಿತವಾಗಿ ತನ್ನ ಅಂಗಡಿಗೆ ಬಂದು ನಿಂದನೆ ಮಾಡುತ್ತಾ ಬೆದರಿಕೆ ಹಾಕುತ್ತಿದ್ದನೆಂದು ಕೂಡ ದೂರಿನಲ್ಲಿ ಉಲ್ಲೇಖಿಸಲಾಗಿದೆ.














