ಢಾಕಾ, ಜುಲೈ 10: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ನಲ್ಲಿ ತಮ್ಮ ದೇಶಕ್ಕೆ ಮರಳಿ ನ್ಯಾಯಾಲಯಕ್ಕೆ ಶರಣಾಗಲು ಯೋಜನೆ ರೂಪಿಸಿದ್ದಾರೆ ಎಂದು ವರದಿಯಾಗಿದೆ. ಅಧಿಕಾರ ಕಳೆದುಕೊಂಡ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ ಹಸೀನಾ, ತಮ್ಮ ಪಕ್ಷದ ಹಿರಿಯ ನಾಯಕರೊಂದಿಗೆ ಸ್ವಯಂಪ್ರೇರಿತವಾಗಿ ಬಾಂಗ್ಲಾದೇಶಕ್ಕೆ ತೆರಳಿ ನ್ಯಾಯಾಂಗ ಪ್ರಕ್ರಿಯೆಯನ್ನು ಎದುರಿಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
2024ರಲ್ಲಿ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಭುಗಿಲೆದ್ದ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದು, ಆಗಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರ ಪತನಗೊಂಡಿತ್ತು. ಬಳಿಕ ಅವರು ಭಾರತದಲ್ಲಿ ಆಶ್ರಯ ಪಡೆದಿದ್ದರು. ನಂತರ ಅಧಿಕಾರಕ್ಕೆ ಬಂದ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರ ಹಾಗೂ ಪ್ರಸ್ತುತ ತಾರಿಕ್ ರೆಹಮಾನ್ ನೇತೃತ್ವದ ಆಡಳಿತವೂ ಶೇಖ್ ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸುವಂತೆ ನಿರಂತರವಾಗಿ ಒತ್ತಾಯಿಸುತ್ತಿವೆ.
ವಿದ್ಯಾರ್ಥಿ ಪ್ರತಿಭಟನೆಗಳನ್ನು ಹತ್ತಿಕ್ಕುವ ವೇಳೆ ನಡೆದ ಹಿಂಸಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಆರೋಪಗಳಲ್ಲಿ ಕಳೆದ ನವೆಂಬರ್ನಲ್ಲಿ ಬಾಂಗ್ಲಾದೇಶದ ನ್ಯಾಯಾಲಯವು ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಿತ್ತು. ಆದರೆ, ದೇಶಭ್ರಷ್ಟರಾಗಿರುವ ಹಸೀನಾ ತಮ್ಮ ವಿರುದ್ಧದ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ ಮಾತನಾಡಿರುವ ಶೇಖ್ ಹಸೀನಾ, ತಮ್ಮ ದೇಶಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
“ನಾನು ಹಿಂತಿರುಗಿದರೆ ನನ್ನನ್ನು ಬಂಧಿಸಬಹುದು, ಬಹುಶಃ ಕೊಲ್ಲಲೂಬಹುದು. ಆದರೂ ನಾನು ನನ್ನ ದೇಶಕ್ಕೆ ಮರಳಲೇಬೇಕು. ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತೀವ್ರ ದಬ್ಬಾಳಿಕೆಗೆ ಒಳಗಾಗುತ್ತಿದ್ದಾರೆ. ಸಾವು ಬಂದರೂ ಅದು ನನ್ನ ಹೆತ್ತವರು ಸಮಾಧಿಯಾಗಿರುವ, ಅವರ ರಕ್ತ ಚೆಲ್ಲಿದ ನನ್ನ ಸ್ವಂತ ಮಣ್ಣಿನಲ್ಲೇ ಆಗಬೇಕು,” ಎಂದು ಅವರು ಹೇಳಿದ್ದಾರೆ.
ಶೇಖ್ ಹಸೀನಾ ಅವರ ಈ ಹೇಳಿಕೆ ಬಾಂಗ್ಲಾದೇಶದ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಅವರು ನಿಜವಾಗಿಯೂ ಡಿಸೆಂಬರ್ನಲ್ಲಿ ದೇಶಕ್ಕೆ ಮರಳುವರೇ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ.














