ಬೆಂಗಳೂರು: ಇಂದಲ್ಲ ನಾಳೆ ಆರ್ಎಸ್ಎಸ್ ಕಡ್ಡಾಯವಾಗಿ ನೋಂದಾಯಿತ ಸಂಸ್ಥೆಯಾಗಬೇಕು; ಇಲ್ಲವಾದರೆ ನಾನು ಮಾಡಿಸುತ್ತೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ದೆವ್ವದಂತೆ ಇದ್ದರೆ, ಭಾರತೀಯ ಜನತಾ ಪಕ್ಷ ಅದರ ನೆರಳು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ನೆರಳಿನೊಂದಿಗೆ ಹೋರಾಟ ಮಾಡುವುದಕ್ಕಿಂತ ಮೂಲದ ವಿರುದ್ಧ ಹೋರಾಟ ಮಾಡಬೇಕು ಎಂದು ಅವರು ಹೇಳಿದರು. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, RSS ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಆರ್ಎಸ್ಎಸ್ ಮುಖ್ಯಸ್ಥರು ಧರ್ಮ ಉಳಿಸಲು ಮೂರು ಮಕ್ಕಳನ್ನು ಹೊಂದಬೇಕು ಎಂದು ಹೇಳುತ್ತಾರೆ. ಆದರೆ, ಅವರು ತಾವೇ ಬ್ರಹ್ಮಚಾರಿಗಳಾಗಿರುತ್ತಾರೆ; ಇದು ಯಾವ ರೀತಿಯ ಧರ್ಮರಕ್ಷಣೆ?” ಎಂದು ಪ್ರಶ್ನಿಸಿದ ಅವರು, “ದೇಣಿಗೆ ಹೇಗೆ ಬರುತ್ತದೆ ಎಂದು ಕೇಳಿದರೆ ಸ್ಪಷ್ಟ ಉತ್ತರ ಇಲ್ಲ. ಆರ್ಎಸ್ಎಸ್ ಅನ್ನು ನೋಂದಾಯಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಆದರೆ ಇಂದಲ್ಲ ನಾಳೆ ಅದು ಕಡ್ಡಾಯವಾಗಿ ರಿಜಿಸ್ಟರ್ ಆಗಬೇಕು; ಇಲ್ಲವಾದರೆ ನಾನು ಮಾಡಿಸುತ್ತೇನೆ” ಎಂದು ಹೇಳಿದ್ದಾರೆ.














