ಡಿ.ಸಿ.ಪ್ರಕಾಶ್, ಸಂಪಾದಕರು
ಬೆಂಗಳೂರು, ಕೆ.ಆರ್.ಪುರಂ: ಸಾರ್ವಜನಿಕರ ತೆರಿಗೆ ಹಣವನ್ನು ಅಭಿವೃದ್ಧಿ ಕಾಮಗಾರಿಗಳಿಗಾಗಿ ವೆಚ್ಚ ಮಾಡಲಾಗುತ್ತಿದೆಯೇ? ಅಥವಾ ಕೇವಲ ದಾಖಲೆಗಳಲ್ಲೇ ಕಾಮಗಾರಿಗಳು ನಡೆದಿವೆಯೇ? ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಹಿಂದೆ ಇದ್ದ ಹೊರಮಾವು ವಾರ್ಡ್ 25, ರಾಮಮೂರ್ತಿ ನಗರ ವಾರ್ಡ್ 26, ವಿಜಿನಾಪುರ ವಾರ್ಡ್ 51, ಕೆ.ಆರ್.ಪುರಂ ವಾರ್ಡ್ 52, ಬಸವನಪುರ ವಾರ್ಡ್ 53, ದೇವಸಂದ್ರ ವಾರ್ಡ್ 55, ಎ.ನಾರಾಯಣಪುರ ವಾರ್ಡ್ 56, ವಿಜ್ಞಾನಪುರ ವಾರ್ಡ್ 81, ಎಚ್.ಎ.ಎಲ್. ಏರ್‌ಪೋರ್ಟ್ ವಾರ್ಡ್ 87 ಮುಂತಾದ ಒಂಬತ್ತು ವಾರ್ಡ್‌ಗಳಲ್ಲಿ ಬೀದಿ ಫಲಕಗಳ (Street Boards) ಮರುಬಣ್ಣ ಬಳಿಯುವ ಹೆಸರಿನಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ವೆಚ್ಚದ ಕುರಿತು ಇದೀಗ ಗಂಭೀರ ಪ್ರಶ್ನೆಗಳು ಎದ್ದಿವೆ.
ಸಮಾಜ ಸೇವಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಅಗರ ಪ್ರಕಾಶ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಅರ್ಜಿ ಸಲ್ಲಿಸಿ ಈ ಸಂಬಂಧ ಮಾಹಿತಿ ಪಡೆದುಕೊಂಡಿದ್ದು, ಬೀದಿ ಫಲಕಗಳ ನಿರ್ವಹಣೆ ಮತ್ತು ಮರುಬಣ್ಣ ಬಳಿಯುವ ಕಾಮಗಾರಿಗಳ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.

13 ವರ್ಷಗಳ ರಾಜಕೀಯ ಆಡಳಿತ; ಬೀದಿ ಫಲಕಗಳ ಸ್ಥಿತಿ ಏನು?
ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದಿಂದ ಬಿ.ಎ.ಬಸವರಾಜ (ಬೈರತಿ ಬಸವರಾಜ) ಅವರು 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2018ರ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಎರಡನೇ ಬಾರಿಗೆ ಗೆಲುವು ಸಾಧಿಸಿದರು. 2019ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿದ ಬಳಿಕ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರಾದರು. 2023ರ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾಗಿದ್ದಾರೆ.
ಇವರು ಮೊದಲ ಬಾರಿಗೆ ಶಾಸಕರಾದ ಸಂದರ್ಭದಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಹೊಸ ಬೀದಿ ಫಲಕಗಳನ್ನು ಅಳವಡಿಸುವುದು ಹಾಗೂ ಹಳೆಯ ಫಲಕಗಳಿಗೆ ಮರುಬಣ್ಣ ಬಳಿಯುವ ಕಾಮಗಾರಿಗಳು ನಡೆದವು. ನಂತರದ ವರ್ಷಗಳಲ್ಲಿ ಇದೇ ರೀತಿಯ ಕಾಮಗಾರಿಗಳು ನಡೆದಿವೆಯೇ ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ. ಕ್ಷೇತ್ರದ ವಿವಿಧ ಭಾಗಗಳಲ್ಲಿರುವ ಬೀದಿ ಫಲಕಗಳ ಪ್ರಸ್ತುತ ಸ್ಥಿತಿಯನ್ನು ಗಮನಿಸಿದಾಗ, ಅವುಗಳ ನಿರ್ವಹಣೆ ಮತ್ತು ಮರುಬಣ್ಣ ಬಳಿಯುವ ಕಾಮಗಾರಿಗಳ ಕುರಿತು ಸಮಗ್ರ ಪರಿಶೀಲನೆ ನಡೆಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

2020ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾಯಿತ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಂಡಿದ್ದು, 2025ರಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ರಚನೆಯಾಗಿದೆ. ಈ ಅವಧಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾಯಿತ ಆಡಳಿತದ ಅನುಪಸ್ಥಿತಿ ಹಾಗೂ ಕಾಮಗಾರಿಗಳ ಮೇಲ್ವಿಚಾರಣೆಯ ಕುರಿತು ಪ್ರಶ್ನೆಗಳು ಎದುರಾಗಿವೆ. ಕ್ಷೇತ್ರದ ವ್ಯಾಪ್ತಿಯಲ್ಲಿನ ಬೀದಿ ಫಲಕಗಳ ನಿರ್ವಹಣೆಗಾಗಿ ಎಷ್ಟು ಹಣ ಖರ್ಚಾಗಿತ್ತು? ಎಷ್ಟು ಫಲಕಗಳಿಗೆ ಮರುಬಣ್ಣ ಬಳಿಯಲಾಗಿದೆ? ಯಾವ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ವಹಿಸಲಾಗಿತ್ತು? ಕಾಮಗಾರಿಗಳು ನಿಜವಾಗಿಯೂ ನಡೆದಿವೆಯೇ? ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳ ಸಮೇತ ಉತ್ತರ ನೀಡಬೇಕಿದೆ.
ಈ ಹಿಂದೆ ಕೆ.ಆರ್.ಪುರಂ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟಿದ್ದ ಬಿಬಿಎಂಪಿಯ ಒಂಬತ್ತು ವಾರ್ಡ್‌ಗಳಲ್ಲಿ ಬೀದಿ ಫಲಕಗಳಿಗೆ ಮರುಬಣ್ಣ ಬಳಿಯುವ ಹೆಸರಿನಲ್ಲಿ ಪ್ರತಿ ವಾರ್ಡ್‌ಗೆ ಸುಮಾರು 20 ಲಕ್ಷ ರೂಪಾಯಿಗಳ ವರೆಗೆ ವೆಚ್ಚ ಮಾಡಿರುವುದಾಗಿ ಹೇಳಲಾಗುತ್ತಿದೆ. ಪ್ರತಿ ವಾರ್ಡ್‌ಗೆ 20 ಲಕ್ಷ ರೂಪಯಿಗಳು ಎಂಬ ಅಂದಾಜಿನ ಪ್ರಕಾರ, ಒಂಬತ್ತು ವಾರ್ಡ್‌ಗಳಿಗೆ ಒಂದು ವರ್ಷದ ವೆಚ್ಚ ಒಂದು ಕೋಟಿ ಎಂಬತ್ತು ಲಕ್ಷ ರೂಪಾಯಿ ಆಗುತ್ತದೆ. ಇದೇ ಪ್ರಮಾಣದಲ್ಲಿ 13 ವರ್ಷಗಳ ಕಾಲ ಪ್ರತಿವರ್ಷ ವೆಚ್ಚ ಮಾಡಿದ್ದರೆ, ಒಟ್ಟು ಮೊತ್ತ ರೂ.23.40 ಕೋಟಿ ಆಗುತ್ತದೆ.

2013ರ ಬಳಿಕ ನಡೆದ ಕಾಮಗಾರಿಗಳ ಬಗ್ಗೆ ಪ್ರಶ್ನೆ
ಸ್ಥಳೀಯರು ಮುಂದಿಡುತ್ತಿರುವ ಆರೋಪದ ಪ್ರಕಾರ, 2013ರಲ್ಲಿ ಕೆಲವು ಬಡಾವಣೆಗಳಲ್ಲಿ ರಸ್ತೆ ಸೂಚನಾ ಫಲಕಗಳನ್ನು ಅಳವಡಿಸುವುದು ಹಾಗೂ ಕೆಲವು ಫಲಕಗಳಿಗೆ ರೇಡಿಯಂ ಸ್ಟಿಕ್ಕರ್‌ಗಳನ್ನು ಅಂಟಿಸುವ ಕೆಲಸ ನಡೆದಿತ್ತು. ಆದರೆ, ನಂತರದ ವರ್ಷಗಳಲ್ಲಿ ಹೊಸ ಬೀದಿ ಸೂಚನಾ ಫಲಕಗಳನ್ನು ಅಳವಡಿಸಿರುವುದು ಅಥವಾ ಹಳೆಯ ಫಲಕಗಳಿಗೆ ಮರುಬಣ್ಣ ಬಳಿದಿರುವುದು ಗಮನಕ್ಕೆ ಬಂದಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಈ ಆರೋಪಗಳ ಸತ್ಯಾಸತ್ಯತೆಯನ್ನು ಸಂಬಂಧಪಟ್ಟ ದಾಖಲೆಗಳು ಹಾಗೂ ಸ್ಥಳ ಪರಿಶೀಲನೆಯ ಮೂಲಕ ದೃಢಪಡಿಸಬೇಕಿದೆ.
ಆರ್‌ಟಿಐ ಮಾಹಿತಿ ಆಧರಿಸಿ ತನಿಖೆಗೆ ಆಗ್ರಹ
ಸಮಾಜ ಸೇವಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡರಾದ ಅಗರ ಪ್ರಕಾಶ್ ಅವರು ಈ ಸಂಬಂಧ ಇಲ್ಲಿಯವರೆಗೆ ಸುಮಾರು 72 ಆರ್‌ಟಿಐ ಅರ್ಜಿಗಳನ್ನು ಸಲ್ಲಿಸಿ ಮಾಹಿತಿ ಕೋರಿದ್ದಾರೆ. ಅಧಿಕಾರಿಗಳು ಕೆಲವೊಂದಕ್ಕೆ ಮಾತ್ರ ಮಾಹಿತಿ ಒದಗಿಸಿ ಉಳಿಕೆ ಅರ್ಜಿಗಳಿಗೆ ಉದ್ದೇಶ ಪೂರಕವಾಗಿ ಮಾಹಿತಿಯನ್ನು ನಿರಾಕರಿಸಿದ್ದಾರೆ. ಅದಲ್ಲದೆ, ಮಾಹಿತಿಗೆ ಸಂಬಂಧಪಟ್ಟಂತೆ ಒಂದು ಅರ್ಜಿಗೂ ದಾಖಲೆಗಳನ್ನು ಕೊಟ್ಟಿರುವುದಿಲ್ಲ. ಮಾಹಿತಿಗಾಗಿ ಅಗರ ಪ್ರಕಾಶ್ ಅವರು ಸುಮಾರು 7 ತಿಂಗಳಿಂದ ಅಲೆದಾಡುತ್ತಿದ್ದಾರೆ.

ಹಾಗಾಗಿ, ಸರ್ಕಾರ ಹಾಗೂ ಜಿಬಿಎ ಅಧಿಕಾರಿಗಳು 2013 ರಿಂದ 2025 ರವರೆಗಿನ ದಾಖಲೆಗಳನ್ನು ಪರಿಶೀಲಿಸಿ, ವರ್ಷವಾರು ಮತ್ತು ವಾರ್ಡ್‌ವಾರು ವೆಚ್ಚದ ವಿವರಗಳನ್ನು ಬಹಿರಂಗಪಡಿಸಬೇಕು. ನಿಗದಿಪಡಿಸಿದ ಮೊತ್ತಕ್ಕೆ ಅನುಗುಣವಾಗಿ ಕಾಮಗಾರಿಗಳು ನಡೆದಿವೆಯೇ ಎಂಬುದನ್ನು ಸ್ಥಳ ಪರಿಶೀಲನೆಯ ಮೂಲಕ ಖಚಿತಪಡಿಸಿಕೊಳ್ಳಬೇಕು. ದಾಖಲೆಗಳಲ್ಲಿ ತೋರಿಸಿರುವ ಕಾಮಗಾರಿಗಳು ವಾಸ್ತವದಲ್ಲಿ ನಡೆದಿಲ್ಲ ಎಂಬುದು ತನಿಖೆಯಲ್ಲಿ ಸಾಬೀತಾದರೆ, ಜವಾಬ್ದಾರಿಯುತ ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಇತರ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
2013 ರಿಂದ 2025 ರವರೆಗೆ ಹಿಂದಿನ ಒಂಬತ್ತು ವಾರ್ಡ್‌ಗಳಲ್ಲಿ ಬೀದಿ ಫಲಕಗಳ ನಿರ್ವಹಣೆಗಾಗಿ ವರ್ಷವಾರು ಎಷ್ಟು ಹಣ ಮಂಜೂರಾಗಿತ್ತು?
ಮರುಬಣ್ಣ ಬಳಿಯುವ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್‌ಗಳು ಮತ್ತು ಕಾರ್ಯಾದೇಶಗಳ ವಿವರಗಳೇನು?
ಯಾವ ಗುತ್ತಿಗೆದಾರರು ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ? ಅವರಿಗೆ ಎಷ್ಟು ಹಣ ಪಾವತಿಸಲಾಗಿದೆ?
ಕಾಮಗಾರಿಗಳು ಪೂರ್ಣಗೊಂಡಿರುವುದನ್ನು ದೃಢೀಕರಿಸಿದ ಅಧಿಕಾರಿಗಳು ಯಾರು?
ದಾಖಲೆಗಳಲ್ಲಿರುವ ಕಾಮಗಾರಿಗಳು ಸ್ಥಳದಲ್ಲಿ ನಡೆದಿವೆಯೇ ಎಂಬುದನ್ನು ಪರಿಶೀಲಿಸಲು ಸ್ವತಂತ್ರ ತಾಂತ್ರಿಕ ತಪಾಸಣೆ ನಡೆಸಲಾಗಿದೆಯೇ?

ಸಾರ್ವಜನಿಕ ಹಣದ ವೆಚ್ಚಕ್ಕೆ ಲೆಕ್ಕ ಕೇಳುವುದು ಜನರ ಹಕ್ಕು
ಬೀದಿ ಫಲಕಗಳಿಗೆ ಬಣ್ಣ ಬಳಿಯುವುದು ಅಥವಾ ಅವುಗಳನ್ನು ನಿರ್ವಹಿಸುವುದು ಸ್ಥಳೀಯ ಆಡಳಿತದ ಸಾಮಾನ್ಯ ಕೆಲಸವಾಗಿರಬಹುದು. ಆದರೆ, ಒಂದೇ ರೀತಿಯ ಕಾಮಗಾರಿಗಳಿಗಾಗಿ ಹಲವು ವರ್ಷಗಳ ಕಾಲ ಹಣ ವೆಚ್ಚವಾಗಿದ್ದರೆ, ಅದರ ಅಗತ್ಯತೆ, ಗುಣಮಟ್ಟ ಮತ್ತು ಫಲಿತಾಂಶಗಳ ಬಗ್ಗೆ ಪ್ರಶ್ನಿಸುವುದು ಸಾರ್ವಜನಿಕರ ಹಕ್ಕು.
ಕೆ.ಆರ್.ಪುರಂ ಕ್ಷೇತ್ರದ ಒಂಬತ್ತು ವಾರ್ಡ್‌ಗಳಲ್ಲಿ ಬೀದಿ ಫಲಕಗಳ ಮರುಬಣ್ಣ ಬಳಿಯುವ ಕಾಮಗಾರಿಗಳಿಗೆ ಸಂಬಂಧಿಸಿದ ಆರೋಪಗಳ ಸತ್ಯಾಸತ್ಯತೆ ಹೊರಬರಬೇಕಾದರೆ, ಕೇವಲ ದಾಖಲೆಗಳ ಪರಿಶೀಲನೆಯಷ್ಟೇ ಅಲ್ಲದೆ ಸ್ಥಳ ಪರಿಶೀಲನೆ, ಪಾವತಿ ದಾಖಲೆಗಳ ಲೆಕ್ಕಪರಿಶೋಧನೆ ಮತ್ತು ಕಾಮಗಾರಿಗಳ ತಾಂತ್ರಿಕ ಮೌಲ್ಯಮಾಪನವೂ ನಡೆಯಬೇಕು.

ಆದ್ದರಿಂದ, ರಾಜ್ಯ ಸರ್ಕಾರ ಹಾಗೂ ನೂತನವಾಗಿ ರಚನೆಯಾಗಿರುವ ಜಿಬಿಎ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು. ಸಾರ್ವಜನಿಕ ಹಣದ ವೆಚ್ಚದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿ, ಅಕ್ರಮಗಳು ನಡೆದಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.















