ಚೆನ್ನೈ: ತಮಿಳುನಾಡಿನಾದ್ಯಂತ 128 ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮೆರವಣಿಗೆಗಳನ್ನು ನಡೆಸಲು ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಅಕ್ಟೋಬರ್ 25 ಮತ್ತು ನವೆಂಬರ್ 1ರಂದು ಮೆರವಣಿಗೆಗಳನ್ನು ಆಯೋಜಿಸಲು ಅವಕಾಶ ಕಲ್ಪಿಸಲಾಗಿದ್ದು, ನ್ಯಾಯಾಲಯದ ಷರತ್ತುಗಳನ್ನು ಪಾಲಿಸುವಂತೆ ಸಂಘಟನೆಗೆ ಸೂಚಿಸಲಾಗಿದೆ.
ಆರ್ಎಸ್ಎಸ್ನ ರಾಜ್ಯ ಕಾರ್ಯದರ್ಶಿ ಜಗದೀಶನ್ ಅವರು, ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಅಕ್ಟೋಬರ್ 18, 25 ಮತ್ತು ನವೆಂಬರ್ 1ರಂದು ರಾಜ್ಯದ 128 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಮದ್ರಾಸ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ವಿ.ಲಕ್ಷ್ಮಿ ನಾರಾಯಣನ್ ಅವರ ಮುಂದೆ ಪ್ರಕರಣದ ವಿಚಾರಣೆ ನಡೆದಾಗ, ಅಕ್ಟೋಬರ್ 25 ಮತ್ತು ನವೆಂಬರ್ 1ರಂದು ಮೆರವಣಿಗೆ ನಡೆಸಲು ಅನುಮತಿ ನೀಡುವುದಾಗಿ ತಮಿಳುನಾಡು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು. ಇದೇ ವೇಳೆ, ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಆರ್ಎಸ್ಎಸ್ ಪರವಾಗಿ ಭರವಸೆ ನೀಡಲಾಯಿತು.
ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯ, ಮೆರವಣಿಗೆ ಮತ್ತು ನಂತರ ನಡೆಯುವ ಸಾರ್ವಜನಿಕ ಸಭೆಗಳಿಗೆ ಪೊಲೀಸರು ಅಕ್ಟೋಬರ್ 19ರೊಳಗೆ ಅನುಮತಿ ನೀಡುವಂತೆ ಆದೇಶಿಸಿತು. ಅಲ್ಲದೆ, ಮೆರವಣಿಗೆಗಳಿಗೆ ಪ್ರತಿವರ್ಷವೂ ನ್ಯಾಯಾಲಯದ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಮರುಕಳಿಸಬಾರದು ಎಂದು ಅಭಿಪ್ರಾಯಪಟ್ಟಿತು. ನ್ಯಾಯಾಲಯ ವಿಧಿಸಿರುವ ಷರತ್ತುಗಳನ್ನು ಆರ್ಎಸ್ಎಸ್ ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿತು.
2023ರಲ್ಲೂ ನಡೆದಿತ್ತು ಕಾನೂನು ಹೋರಾಟ
ತಮಿಳುನಾಡಿನಲ್ಲಿ ಆರ್ಎಸ್ಎಸ್ ಮೆರವಣಿಗೆಗಳಿಗೆ ಅನುಮತಿ ನಿರಾಕರಿಸಿ 2023ರಲ್ಲಿ ಏಕಸದಸ್ಯ ನ್ಯಾಯಪೀಠ ನೀಡಿದ್ದ ಆದೇಶವನ್ನು ನಂತರ ರದ್ದುಗೊಳಿಸಲಾಗಿತ್ತು. ಮೆರವಣಿಗೆಗಳಿಗೆ ಅನುಮತಿ ನೀಡುವ ವಿಚಾರವಾಗಿ ನಡೆದ ಕಾನೂನು ಹೋರಾಟದಲ್ಲಿ ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ತರುವಾಯ, 2023ರಲ್ಲಿ ಆರ್ಎಸ್ಎಸ್ ತಮಿಳುನಾಡಿನ 45 ಸ್ಥಳಗಳಲ್ಲಿ ಮೆರವಣಿಗೆಗಳನ್ನು ನಡೆಸಿತ್ತು ಇದೀಗ 128 ಸ್ಥಳಗಳಲ್ಲಿ ಮೆರವಣಿಗೆ ನಡೆಸಲು ಅನುಮತಿ ದೊರೆತಿರುವುದು ಗಮನಾರ್ಹವಾಗಿದೆ.














