ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನಲ್ಲಿದ್ದಾಗ ಮೊಬೈಲ್ ಬಳಸಿದ ಆರೋಪಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಮತ್ತಷ್ಟು ಮಹತ್ವದ ಮಾಹಿತಿಗಳು ಬೆಳಕಿಗೆ ಬಂದಿವೆ. ಮೊಬೈಲ್ ಹಾಗೂ ಪೆನ್‌ಡ್ರೈವ್‌ಗೆ ಸಂಬಂಧಿಸಿದಂತೆ ನಡೆದ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ (FSL) ಪರಿಶೀಲನೆಯ ಬಳಿಕ ಪೊಲೀಸರ ತನಿಖೆಗೆ ಹೊಸ ಸುಳಿವುಗಳು ದೊರೆತಿವೆ ಎನ್ನಲಾಗಿದೆ.
ಮೊಬೈಲ್ ಬಳಕೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಲಭ್ಯವಾಗಿರುವ ಎಫ್‌ಎಸ್‌ಎಲ್ ವರದಿಯಲ್ಲಿ ಹಲವು ಮಹತ್ವದ ಡಿಜಿಟಲ್ ಮಾಹಿತಿಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ತನಿಖೆಯ ವೇಳೆ ವಶಪಡಿಸಿಕೊಳ್ಳಲಾಗಿದ್ದ ಪೆನ್‌ಡ್ರೈವ್‌ನಲ್ಲಿ ಒಟ್ಟು 173 ವಿಡಿಯೋ ಫೈಲ್‌ಗಳು ಪತ್ತೆಯಾಗಿದ್ದು, ಅವುಗಳಲ್ಲಿ ಪ್ರಜ್ವಲ್ ರೇವಣ್ಣ ಅವರದ್ದೇ ಎನ್ನಲಾದ ಮೂರು ವಿಡಿಯೋಗಳೂ ಇರುವುದಾಗಿ ವರದಿಯಾಗಿದೆ.
ಇದರೊಂದಿಗೆ 100ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ ಎನ್ನಲಾಗಿದ್ದು, ಈ ವಿಡಿಯೋಗಳ ಮೂಲ, ಬಳಕೆ ಹಾಗೂ ಅವುಗಳನ್ನು ಯಾವ ಸಂದರ್ಭದಲ್ಲಿ ವೀಕ್ಷಿಸಲಾಗಿತ್ತು ಎಂಬುದರ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ಮಹಿಳೆಯರೊಂದಿಗೆ ವಿಡಿಯೋ ಕಾಲ್ ನಡೆಸಿರುವ ಕುರಿತ ಡಿಜಿಟಲ್ ಸುಳಿವುಗಳೂ ತನಿಖೆಯಲ್ಲಿ ದೊರೆತಿವೆ ಎಂದು ಹೇಳಲಾಗಿದೆ.
ಜೈಲಿಗೆ ಮೊಬೈಲ್ ಹೇಗೆ ತಲುಪಿತು?
ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನೊಳಗೆ ಮೊಬೈಲ್ ತಲುಪಿಸಿದ ಆರೋಪದ ಹಿನ್ನೆಲೆಯಲ್ಲಿ ಪರಪ್ಪನ ಅಗ್ರಹಾರ ಜೈಲು ವಾರ್ಡನ್ ಪಾತ್ರವೂ ತನಿಖೆಯ ವ್ಯಾಪ್ತಿಗೆ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮೊಬೈಲ್ ಒದಗಿಸಲು ಹಣ ನೀಡಲಾಗಿದೆ ಎಂಬ ಆರೋಪಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಮೊಬೈಲ್ ಬಳಸಿ ಹಲವು ಯುವತಿಯರಿಗೆ ಕರೆ ಮಾಡಲಾಗಿದೆ ಎಂಬ ಆರೋಪವೂ ಕೇಳಿಬಂದಿದ್ದು, ಬಳಸಲಾಗಿದ್ದ ಸಿಮ್ ಕಾರ್ಡ್ ಮತ್ತು ಕರೆ ವಿವರಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮೊಬೈಲ್ ಹಾಗೂ ಸಿಮ್ ಪಡೆಯಲು ಹಣದ ವಹಿವಾಟು ನಡೆದಿರುವ ಆರೋಪಗಳ ಬಗ್ಗೆಯೂ ತನಿಖೆ ಮುಂದುವರಿದಿದೆ.
ಮೊಬೈಲ್, ಪೆನ್‌ಡ್ರೈವ್‌ನಲ್ಲಿ ಡಿಜಿಟಲ್ ಸಾಕ್ಷ್ಯಗಳ ಹುಡುಕಾಟ
ಈ ಹಿಂದೆ ಸಿಸಿಬಿ ನಡೆಸಿದ ದಾಳಿಯ ವೇಳೆ ಮೊಬೈಲ್ ಫೋನ್ ಮತ್ತು ಪೆನ್‌ಡ್ರೈವ್ ಪತ್ತೆಯಾಗಿತ್ತು. ಅವುಗಳಲ್ಲಿದ್ದ ಡೇಟಾವನ್ನು ಎಫ್‌ಎಸ್‌ಎಲ್ ಮೂಲಕ ಪರಿಶೀಲಿಸಲಾಗಿದ್ದು, ಕೆಲವು ವಿಡಿಯೋಗಳನ್ನು ರಿಟ್ರೀವ್ ಮಾಡಲಾಗಿದೆ. ಇನ್ನಷ್ಟು ಡೇಟಾವನ್ನು ಮರುಪಡೆಯುವ ಪ್ರಕ್ರಿಯೆಯೂ ಮುಂದುವರಿದಿದೆ ಎನ್ನಲಾಗಿದೆ.
ಲಭ್ಯವಾಗಿರುವ ವಿಡಿಯೋಗಳು, ಕರೆ ವಿವರಗಳು ಹಾಗೂ ಇತರ ಡಿಜಿಟಲ್ ಸಾಕ್ಷ್ಯಗಳ ಆಧಾರದ ಮೇಲೆ ಪ್ರಜ್ವಲ್ ರೇವಣ್ಣ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ವಿಡಿಯೋ ಕಾಲ್‌ಗಳಲ್ಲಿ ಸಂಪರ್ಕದಲ್ಲಿದ್ದರೆಂದು ಗುರುತಿಸಲಾಗಿರುವ ಮಹಿಳೆಯರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಲು ಸಿಬ್ಬಂದಿಗೂ ಸಂಕಷ್ಟ?
ಪ್ರಜ್ವಲ್ ರೇವಣ್ಣ ಅವರಿಗೆ ಮೊಬೈಲ್ ತಲುಪಿಸಿದ ಆರೋಪದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಜೈಲು ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಆರೋಪಗಳು ಸಾಬೀತಾದಲ್ಲಿ ಜೈಲು ಆಡಳಿತಕ್ಕೆ ಸಂಬಂಧಿಸಿದವರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಹಲವು ಗಂಭೀರ ಪ್ರಕರಣಗಳನ್ನು ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ, ಮೊಬೈಲ್ ಮತ್ತು ಪೆನ್‌ಡ್ರೈವ್‌ನಿಂದ ದೊರೆತಿರುವ ಡಿಜಿಟಲ್ ಸಾಕ್ಷ್ಯಗಳು ತನಿಖೆಗೆ ಹೊಸ ತಿರುವು ನೀಡಿವೆ. ಎಫ್‌ಎಸ್‌ಎಲ್‌ನಿಂದ ಸಂಪೂರ್ಣ ಮಾಹಿತಿ ಲಭ್ಯವಾದ ಬಳಿಕ ಪ್ರಕರಣದ ತನಿಖೆ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.














