ಚೆನ್ನೈ, ಜು.2: ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಲು ಕರ್ನಾಟಕ ಸರ್ಕಾರ ನಡೆಸುತ್ತಿರುವ ಪ್ರಯತ್ನಗಳನ್ನು ತಮಿಳುನಾಡು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ.
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಮಾಣಿಕ್ಕಂ ಠಾಕೂರ್ (Manickam Tagore) ಅವರ ಅಧ್ಯಕ್ಷತೆಯಲ್ಲಿ ಹಾಗೂ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮತ್ತು ರಾಜ್ಯ ಪ್ರವಾಸೋದ್ಯಮ ಸಚಿವ ರಾಜೇಶ್ ಕುಮಾರ್ (Rajesh Kumar) ಅವರ ಸಮ್ಮುಖದಲ್ಲಿ ಗುರುವಾರ ಚೆನ್ನೈನ ಸತ್ಯಮೂರ್ತಿ ಭವನದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆಯಿತು.
ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದಲ್ಲಿ, ಕರ್ನಾಟಕ ಸರ್ಕಾರ ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ತೀವ್ರ ಪ್ರಯತ್ನ ನಡೆಸುತ್ತಿರುವುದು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು ಹಾಗೂ 2018ರ ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಅಲ್ಲದೆ, ಇದು ನ್ಯಾಯಾಂಗದ ಆದೇಶಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.

ತಮಿಳುನಾಡಿನ ಅನುಮತಿಯಿಲ್ಲದೆ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಅಣೆಕಟ್ಟಿನ ನಿರ್ಮಾಣಕ್ಕೆ ಒಂದು ಇಟ್ಟಿಗೆಯನ್ನೂ ಇಡಲು ಅವಕಾಶ ನೀಡುವುದಿಲ್ಲ ಎಂಬ ಮಾಣಿಕ್ಕಂ ಠಾಕೂರ್ ಅವರ ಹೇಳಿಕೆಯನ್ನು ಸಭೆ ಸ್ವಾಗತಿಸಿ ಅಭಿನಂದಿಸಿದೆ.
ಕಾವೇರಿ ಡೆಲ್ಟಾ ಭಾಗದ ರೈತರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಯೋಜನೆಯನ್ನು ತಮಿಳುನಾಡು ಕಾಂಗ್ರೆಸ್ ಬಲವಾಗಿ ವಿರೋಧಿಸಿ ಹೋರಾಟ ಮುಂದುವರಿಸಲಿದೆ ಎಂದು ನಿರ್ಣಯದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ಸಭೆಯಲ್ಲಿ, ತಮಿಳುನಾಡಿನ ರಾಜಕೀಯದಲ್ಲಿ ಕೆ.ಕಾಮರಾಜ್ ಹಾಗೂ ಎಂ.ಜಿ.ರಾಮಚಂದ್ರನ್ (MGR) ಅವರಂತೆ ಮುಖ್ಯಮಂತ್ರಿ ವಿಜಯ್ ಅವರು ಪ್ರಬಲ ನಾಯಕನಾಗಿ ಹೊರಹೊಮ್ಮಲಿದ್ದಾರೆ ಎಂದು ಪ್ರಶಂಸಿಸುವ ಮತ್ತೊಂದು ನಿರ್ಣಯವನ್ನೂ ಅಂಗೀಕರಿಸಲಾಯಿತು.













