ಬೆಂಗಳೂರು: ಗೃಹ ಕಲಹದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯನ್ನು ಕೆ.ಆರ್.ಪುರ ಪೊಲೀಸರು ಸಮಯೋಚಿತ ಕಾರ್ಯಾಚರಣೆಯ ಮೂಲಕ ರಕ್ಷಿಸಿದ ಘಟನೆ ನಡೆದಿದೆ.
ಮೇ 17, 2026ರಂದು ಸಂಜೆ ಸುಮಾರು 4:14 ಗಂಟೆಗೆ, ಕೃಷ್ಣರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಯ್ಯಪ್ಪನಗರ 2ನೇ ಮುಖ್ಯರಸ್ತೆಯಲ್ಲಿನ ಮನೆಯಲ್ಲಿ ಮಹಿಳೆಯೊಬ್ಬರು ಪತಿಯೊಂದಿಗೆ ಜಗಳವಾಡಿ ಮನನೊಂದು ಆತ್ಮಹತ್ಯೆಗೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಪೊಲೀಸ್ ಸಹಾಯವಾಣಿಗೆ ಕರೆ ಮೂಲಕ ಲಭ್ಯವಾಗಿದೆ.
ದೂರು ಸ್ವೀಕರಿಸಿದ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸ್ ಸಹಾಯವಾಣಿ ಸಿಬ್ಬಂದಿ, ಮಾಹಿತಿಯನ್ನು ಕೆ.ಆರ್.ಪುರ ಪೊಲೀಸ್ ಠಾಣೆಯ ಹೊಯ್ಸಳ-220 ವಾಹನದಲ್ಲಿದ್ದ ಮಹಿಳಾ ಎಎಸ್‌ಐ ಪಿ.ವೀಣಾ ಹಾಗೂ ಹೆಚ್‌ಸಿ ರಾಘವೇಂದ್ರ ಅವರಿಗೆ ರವಾನಿಸಿದ್ದಾರೆ. ಮಾಹಿತಿ ಪಡೆದ ಕೇವಲ 9 ನಿಮಿಷಗಳಲ್ಲೇ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆ ತೀವ್ರ ಮಾನಸಿಕ ಒತ್ತಡದ ನಡುವೆ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುವುದನ್ನು ಗಮನಿಸಿ ತಕ್ಷಣ ಮಧ್ಯಪ್ರವೇಶಿಸಿ ಆತ್ಮಹತ್ಯೆ ನಡೆಯುವುದನ್ನು ತಡೆದಿದ್ದಾರೆ. ಬಳಿಕ ಮಹಿಳೆಯೊಂದಿಗೆ ಸಮಾಲೋಚನೆ ನಡೆಸಿ ಧೈರ್ಯ ತುಂಬಿದ ಪೊಲೀಸರು, ಅವರ ಪತಿಗೂ ಸೂಕ್ತ ಸಲಹೆ ಮತ್ತು ಮನವರಿಕೆ ಮಾಡಿದ್ದಾರೆ.
ಈ ಘಟನೆ ಗೃಹ ಕಲಹಗಳಿಂದ ಉಂಟಾಗುವ ದುರಂತಗಳನ್ನು ತಡೆಯಲು ತ್ವರಿತ ಪೊಲೀಸ್ ಕ್ರಮ, ಮಾನಸಿಕ ಬೆಂಬಲ ಹಾಗೂ ಮಾನವೀಯ ಸೇವೆಯ ಅಗತ್ಯತೆಯನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಬೆಂಗಳೂರು ನಗರ ಪೊಲೀಸರ ಸೂಕ್ಷ್ಮ ಹಾಗೂ ಸಮಯೋಚಿತ ಕಾರ್ಯಾಚರಣೆ ಮಹಿಳೆಯ ಜೀವ ಉಳಿಸುವುದರ ಜೊತೆಗೆ ಗಂಭೀರ ಪರಿಸ್ಥಿತಿಯನ್ನು ಶಾಂತಗೊಳಿಸಲು ಸಹಕಾರಿಯಾಗಿದೆ.














