ಡಿ.ಸಿ.ಪ್ರಕಾಶ್, ಸಂಪಾದಕರು
ಸಾರಾಂಶ: ಬೆಂಗಳೂರು ಕೆ.ಆರ್.ಪುರಂ ಕ್ಷೇತ್ರದ ಹೊರಮಾವು ಅಗರ ವಾರ್ಡ್-2ರಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಮುಖಂಡರು, ವಿಶೇಷವಾಗಿ ಮಹಿಳಾ ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು. ಡಿ.ಕೆ.ಮೋಹನ್ ಬಾಬು ಬಿಜೆಪಿ ಮತ್ತು ಮೋದಿ ವಿರುದ್ಧ ವಾಗ್ದಾಳಿ ನಡೆಸಿ, ಪ್ರಜಾಪ್ರಭುತ್ವದಲ್ಲಿ ಭಯ ಬೇಡ, ಹಕ್ಕುಗಳಿಗಾಗಿ ನಿಲ್ಲಬೇಕು ಎಂದು ಕರೆ ನೀಡಿದರು.
ಬೆಂಗಳೂರು: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರ, ಹೊರಮಾವು ಅಗರ ವಾರ್ಡ್-2 ರಲ್ಲಿ, ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಮೋಹನ್ ಬಾಬು ಅವರ ನೇತೃತ್ವದಲ್ಲಿ ಮತ್ತು ಹಿರಿಯ ಕಾಂಗ್ರೆಸ್ ಮುಖಂಡರು ಹಾಗೂ ಹೊರಮಾವು ಅಗರ ವಾರ್ಡ್ ನಂ.2ರ BECC-GBA ಚುನಾವಣೆಯ ಪ್ರಬಲ ಆಕಾಂಕ್ಷಿಯೂ ಆಗಿರುವ ಅಗರ ಪ್ರಕಾಶ್ ಅವರ ಮುಖಂಡತ್ವದಲ್ಲಿ ನೆನ್ನೆ ಬೇರೆ ಪಕ್ಷಗಳನ್ನು ತೊರೆದ ನೂರಾರು ಮುಖಂಡರು ವಿಷೇಶವಾಗಿ ಮಹಿಳಾ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿ.ಕೆ.ಮೋಹನ್ ಬಾಬು ಅವರು, “ನೀವೆಲ್ಲಾ ಇಲ್ಲಿ ಸೇರಿರೋದೆ ದೊಡ್ದ ಸಾಧನೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾನು ನಿಮ್ಮನ್ನೆಲ್ಲ ಭೇಟಿಯಾಗಲು ಸಾಧ್ಯ ಆಗಲಿಲ್ಲ. ನನಗೆ ಸಿಕ್ಕಿದ್ದು ಕಡಿಮೆ ಸಮಯ. ಬಹಳಷ್ಟು ಜನ ಆ ಸಂದರ್ಭದಲ್ಲಿ ನಮ್ಮೊಂದಿಗೆ ಇರಲಿಲ್ಲ. ಆ ಕಾರಣದಿಂದ ಈ ಭಾಗದಲ್ಲಿ ನನಗೆ 12 ಸಾವಿರ ಮತಗಳು ಮೈನಸ್ ಆದವು. ಆ ಸಮಯದಲ್ಲಿ ನಮ್ಮೊಂದಿಗೆ ಇದ್ದಿದ್ದು ವೆಂಕಟೇಶ್, ಪ್ರಕಾಶ್, ಕ್ಯಾಲಸನಹಳ್ಳಿ ಶ್ರೀನಿವಾಸ್, ವಿನೋದ್, ಪ್ರಸನ್ನ, ಗಂಗಾಧರ್, ಸುನಿಲ್ ಮುಂತಾದವರಷ್ಟೆ ನಮ್ಮೊಂದಿಗೆ ಇದ್ದರು. ಬಹುಶಃ ನೀವೆಲ್ಲಾ ಇದ್ದಿದ್ದರೆ ನಾನು ಸುಲುಭವಾಗಿ ಗೆದ್ದುಬಿಡುತ್ತಿದ್ದೆ” ಎಂದು ಹೇಳಿದರು.
“ಚುನಾವಣೆಯ ಸಂದರ್ಭದಲ್ಲಿ ವೆಂಕಟೇಶ್, ಪ್ರಕಾಶ್ ಅವರು ಬಂದು ‘ಅಣ್ಣಾ ಯಾರೂ ಬರ್ತಾ ಇಲ್ಲ ಭಯ ಬೀಳ್ತಾ ಇದ್ದಾರೆ’ ಅಂತ ಹೇಳಿದಾಗ ನನಗೆ ಆಶ್ಚರ್ಯ ಆಯಿತು. ಓಟು ಹಾಕೋದು ಬಿಡೋದು – ಗೆಲ್ಲೋದು ಸೋಲೋದು ಅದು ಬೇರೆ. Entirely Different. ಆದರೆ, ನನಗೆ ಬೇಕಾಗಿರುವವರ ಜೊತೆಯಲ್ಲಿ ಓಡಾಡಕ್ಕೆ ಆಗೋದಿಲ್ಲ.. ನನಗೆ ಬೇಕಾಗಿರುವವರ ಜೊತೆಯಲ್ಲಿ ಮಾತನಾಡಕ್ಕೆ ಆಗೋದಿಲ್ಲ.. ನನಗೆ ಬೇಕಾಗಿರುವವರಿಂದ ಓಟು ಹಾಕಿಸಿಕೊಳ್ಳಕ್ಕೆ ಆಗೋದಿಲ್ಲ ಎಂದರೆ ಅರ್ಥ ಏನು” ಎಂದು ಪ್ರಶ್ನಿಸಿದರು.

“ನಾವು ಭಾರತದಂತ ಪ್ರಜಾ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಹುಟ್ಟಿದ್ದೇವೆ. ದೇಶದ ಎಲ್ಲಾ ಭಾಗದ ಜನರೂ ಇಲ್ಲಿ ವಾಸವಾಗಿದ್ದಾರೆ. ಇದು ಮೆಟ್ರೋಪಾಲಿಟನ್ ಸಿಟಿ. ಇಂತಹ ವಿಶ್ವ ಪ್ರಖ್ಯಾತಿ ಬೆಂಗಳೂರಿನಲ್ಲಿ ಇದ್ದುಕೊಂಡು, ಐಟಿ ಸೆಕ್ಟರ್ ನಂತಹ ಜಾಗದಲ್ಲಿ ಇದ್ದುಕೊಂಡು ಬೇರೊಬ್ಬರಿಗೆ (ಬೈರತಿ ಬಸವರಾಜ) ಭಯ ಬೀಳ್ತಾರೆ ಅಂದರೆ ನಿಜವಾಗಲು ಆಶ್ಚರ್ಯವಾಗಿದೆ. ಯಾವ ಮಟ್ಟದಲ್ಲಿ ಈ ಭಾಗವನ್ನು ಅವರು ಮಾಡುತ್ತಿದ್ದಾರೆ. ಯಾವ ಮಟ್ಟದಲ್ಲಿ ಅವರು ಆ ಕೃತ್ಯಗಳನ್ನು ಎಸಗುತ್ತಿದ್ದಾರೆ ಎಂದರೆ, ಬಹುಶಃ ಭಗವಂತ ಇದ್ದಾನೋ ಇಲ್ವೋ ಯಾರಿಗೂ ಗೊತ್ತಿಲ್ಲ. ಆದರೆ ಕರ್ಮ ಅನ್ನೋದೊಂದು ಇದೆ. ಯಾರು ಅತಿಯಾಗಿ ಏನಾದರೂ ಮಾಡ್ತಾರೋ ಅವರಿಗೆ ಎಲ್ಲೋ ಒಂದು ಕಡೆ ಶಿಕ್ಷೆ ಆಗಿಯೇ ಆಗುತ್ತೆ. ಅವರು ಜೈಲಿಗೆ ಹೋಗಿದ್ದಾರೆ ಎಂದರೆ ಅದಕ್ಕೆ ಇನ್ನೇನು ಕಾರಣ? ಇಷ್ಟು ಅಧಿಕಾರದಲ್ಲಿದ್ದು, ಇಷ್ಟು ಐಶ್ವರ್ಯ ಇಟ್ಟುಕೊಂಡು.. ಇಷ್ಟು ಸಂಪತ್ತನ್ನು ಇಟ್ಟೊಂಡು.. ಇಷ್ಟು ಜನರನ್ನು ಜೊತೆ ಇಟ್ಕೊಂಡು.. ಇವತ್ತು ಕರ್ಮ ಬಿಟ್ಟಿದೆಯ ಅವರನ್ನ. ನಾವು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು” ಎಂದು ಕಿಡಿಕಾರಿದರು.
“ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಯಾರ ಹಕ್ಕುನ್ನೂ ನಾವು ಕಿತ್ತುಕೊಳ್ಳಬಾರದು. ಪ್ರೀತಿಯನ್ನು ಗೆಲ್ಲಬೇಕು. ಪ್ರೀತಿಯಿಂದ ಯಾರನ್ನದರೂ ಮಾತನಾಡಿಸಬಹುದು. ನನ್ನ ಮನಸ್ಸಿಗೆ ಯಾರ ಜೊತೆಗೆ ಹೋಗಬೇಕೆಂದು ಇಷ್ಟ ಇದೆಯೋ ಅವರ ಜೊತೆ ಹೋಗಿ ನಮ್ಮ ಹಕ್ಕು” ಎಂದರು.

“ಕಳೆದ 13 ವರ್ಷಗಳಲ್ಲಿ ಪ್ರಧಾನಿ ಮೋದಿ ಅವರು ಹಲಾವಾರು ಪ್ರಕಟಣೆಗಳನ್ನು ಮಾಡಿದರು. ರೂಪಾಯಿಯ ಮೌಲ್ಯ ಹೆಚ್ಚು ಮಾಡುತ್ತೇನೆ, ಡಾಲರ್ ಗೆ ಸರಿ ಸಮಾನವಾಗಿ ಮಾಡುತ್ತೇನೆ ಎಂದರು ಆಯ್ತಾ? ಎಲ್ಲರಿಗೂ ಉದ್ಯೋಗ.. ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡ್ತಿನಿ ಎಂದರು ಕೊಟ್ಟಿದ್ದಾರಾ? ಇವತ್ತು ಎಷ್ಟು ನಿರುದ್ಯೋಗಿಗಳಿದ್ದಾರೆ? ಇವತ್ತು ಎಷ್ಟು ಇಂಡಿಸ್ಟ್ರೀಯಲ್ ಗಳು ಮುಚ್ಚುವಂತ ಪರಿಸ್ಥಿತಿಗೆ ಹೋಗಿವೆ? ಸ್ಮಾರ್ಟ್ ಸಿಟಿ ಮಾಡ್ತಿವಿ ಎಂದರು ಮಾಡಿಲ್ಲ. ಬುಲೆಟ್ ಟ್ರೈನ್ ಬಿಡ್ತಿವಿ ಎಂದರು ಬಿಟ್ಟಿದ್ದಾರಾ? ಪೆಟ್ರೋಲ್-ಗ್ಯಾಸ್ ಬೆಲೆ ಕಡಿಮೆ ಮಾಡ್ತಿನಿ ಎಂದರು ಎಲ್ಲಿ ಮಾಡಿದ್ದಾರೆ. ದಿನನಿತ್ಯ ಬಳಕೆಯಾಗುವ ಸಾಮಗ್ರಿಗಳ ಬೆಲೆ ಕಡಿಮೆ ಮಾಡ್ತಿವಿ ಎಂದರು ಮಾಡಿದ್ದಾರಾ? ಮೋದಿ ಅವರು ಚುನಾವಣೆಗೆ ಮುಂಚೆ ಹೇಳಿದ ಒಂದನ್ನಾದರು ಈಡೇರಿಸಿದ್ದಾರಾ? ಒಂದೂ ಮಾಡಿಲ್ಲ. ಅವರಿಂದ ಒಂದೇ ಒಂದನ್ನು ಮಾಡಲು ಸಾಧ್ಯ ಸುಳ್ಳನ್ನು ಬಹಳ ಚೆನ್ನಾಗಿ ಹೇಳುವುದು. ಮತ್ತು ಆಸೆ ತೋರಿಸುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹೊರಮಾವು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸಿ.ವೆಂಕಟೇಶ್, ಹೊರಮಾವು ಅಗರ ವಾರ್ಡ್ ನಂ.2ರ BECC-GBA ಚುನಾವಣೆಯ ಪ್ರಬಲ ಆಕಾಂಕ್ಷಿಯಾದ ಅಗರ ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡರಾದ ಕ್ಯಾಲಸನಹಳ್ಳಿ ಶ್ರೀನಿವಾಸ್, ಹೆಚ್.ಕೆ.ಸುರೇಶ್, ಎಂ.ಎಸ್.ಗುರುದಾಸ್, ಪುರುಷೋತ್ತಮ ಬಾಬು, ಹೊರಮಾವು ವಾರ್ಡ್ ಅಧ್ಯಕ್ಷ ಪ್ರಸನ್ನ, ಕಲ್ಕರೆ ವಾರ್ಡ್ ಅಧ್ಯಕ್ಷ ಸುನಿಲ್, ರಾಕೇಶ್ ರೆಡ್ಡಿ, ಗಂಗಾದರ್ ರೆಡ್ಡಿ, ದೇವರಾಜು, ಟಿ.ಎನ್.ಬಲವಂತ್ ಹಾಗೂ ಶಫಿ ಇನ್ನಿತರರು ಭಾಗವಹಿಸಿದ್ದರು.














