ಭಾರತ–ಅಮೆರಿಕ ಒಪ್ಪಂದ ಘೋಷಣೆಗೆ ಹತ್ತು ದಿನಗಳಾಗಿವೆ. “ಈ ಒಪ್ಪಂದದಿಂದ ರೈತರ ಹಿತಾಸಕ್ತಿಗೆ ಯಾವುದೇ ಹಾನಿಯಾಗಿಲ್ಲ” ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಹೇಳಿದ್ದರೂ, ನೆಲಮಟ್ಟದ ರೈತ ಸಂಘಟನೆಗಳು ಗಂಭೀರ ಆತಂಕ ವ್ಯಕ್ತಪಡಿಸಿವೆ. ಅದಕ್ಕಾಗಿ ಫೆಬ್ರವರಿ 12ರಂದು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಲಾಗಿದೆ. ಕಾರ್ಮಿಕ ಸಂಘಗಳೂ ಸಹ ತಮ್ಮ ಬೇಡಿಕೆಗಳೊಂದಿಗೆ ಹೋರಾಟಕ್ಕೆ ಇಳಿಯುತ್ತಿರುವುದು ಗಮನಾರ್ಹ.
ಭಾರತ ಕೃಷಿ ವ್ಯವಸ್ಥೆ ಮುಖ್ಯವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಮೇಲೆ ಅವಲಂಬಿತವಾಗಿದೆ. ಆದರೆ ಅಮೆರಿಕದಂತಹ ದೇಶಗಳಲ್ಲಿ ರೈತರು ನೂರಾರು ಎಕರೆ ಭೂಮಿಯನ್ನು ಹೊಂದಿರುವ ದೊಡ್ಡ ಮಟ್ಟದ ಕೃಷಿ ಉದ್ಯಮಿಗಳು. ಈಗ ಅಂತಹ ದೈತ್ಯ ಕೃಷಿ ವ್ಯವಸ್ಥೆಗೆ ಭಾರತೀಯ ಮಾರುಕಟ್ಟೆ ಬಾಗಿಲು ತೆರೆದಿದೆ. ಕಡಿಮೆ ಉತ್ಪಾದನಾ ವೆಚ್ಚ, ಹೆಚ್ಚಿನ ಸಬ್ಸಿಡಿ ಮತ್ತು ಮೂಲಸೌಕರ್ಯ ಸೌಲಭ್ಯಗಳ ನೆರವಿನಿಂದ ಅವರು ತಮ್ಮ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಸಾಧ್ಯ.
ಪಾಶ್ಚಾತ್ಯ ಉತ್ಪನ್ನಗಳ ಮೇಲೆ ಇರುವ ಆಕರ್ಷಣೆಯೂ ಇದಕ್ಕೆ ಸೇರ್ಪಡೆಯಾದರೆ, ಭಾರತೀಯ ಗ್ರಾಹಕರು ಆಮದು ಸರಕುಗಳತ್ತ ಹೆಚ್ಚು ಸೆಳೆಯಲ್ಪಡುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಸ್ಥಳೀಯ ರೈತರಿಗೆ ಸ್ಪರ್ಧೆ ಕಠಿಣವಾಗುತ್ತದೆ. ಕೊನೆಗೆ ಸಣ್ಣ ರೈತರು ಕೃಷಿ ತ್ಯಜಿಸುವ ಸ್ಥಿತಿಗೆ ತಲುಪುವ ಅಪಾಯವಿದೆ. ಮಾರುಕಟ್ಟೆ ಏಕಪಕ್ಷೀಯವಾಗಿ ರೂಪುಗೊಂಡು ಬೆಲೆಗಳು ಅಸ್ಥಿರವಾಗುವ ಸಾಧ್ಯತೆ ಹೆಚ್ಚುತ್ತದೆ.

ಇನ್ನೊಂದು ಪ್ರಶ್ನೆ – ಇಲ್ಲಿಂದ ಅಮೆರಿಕಕ್ಕೆ ರಫ್ತು ಮಾಡುವ ಸರಕುಗಳಿಗೆ ಸುಮಾರು 18% ತೆರಿಗೆ ವಿಧಿಸಲಾಗುತ್ತಿದೆ. ಆದರೆ ಅಮೆರಿಕದಿಂದ ಬರುವ ಅನೇಕ ಕೃಷಿ ಉತ್ಪನ್ನಗಳ ಮೇಲೆ ತೆರಿಗೆ ಕಡಿತ ಅಥವಾ ರದ್ದು ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪರಸ್ಪರ ಸಮಾನತೆ ಎಲ್ಲಿದೆ? ನಮ್ಮ ಸರಕುಗಳಿಗೆ ಹೆಚ್ಚಿನ ತೆರಿಗೆ ಇದ್ದರೆ, ಅವರ ಸರಕುಗಳಿಗೆ ಕನಿಷ್ಠ ಸಮಾನ ಪ್ರಮಾಣದ ತೆರಿಗೆ ವಿಧಿಸಬಾರದೇ?
ಇದೇ ಸಂದರ್ಭದಲ್ಲಿ ಕೃಷಿ ಕಾನೂನುಗಳು, ಎಂ.ಎಸ್.ಸ್ವಾಮಿನಾಥನ್ ವರದಿ ಜಾರಿ, ಕನಿಷ್ಠ ಬೆಂಬಲ ಬೆಲೆ (MSP) ಭರವಸೆ ಸೇರಿದಂತೆ ಹಲವು ವಿಚಾರಗಳಲ್ಲಿ ರೈತರ ಬೇಡಿಕೆಗಳು ಇನ್ನೂ ಈಡೇರಿಲ್ಲ ಎಂಬ ಅಸಮಾಧಾನವೂ ಇದೆ. ಈ ಹಿನ್ನೆಲೆಯಲ್ಲಿ ಅಮೆರಿಕದಿಂದ ಕೃಷಿ ಉತ್ಪನ್ನಗಳ ಆಮದು ನಿಲ್ಲಿಸಬೇಕು ಎಂಬುದು ನಾಳಿನ ಪ್ರತಿಭಟನೆಯ ಪ್ರಮುಖ ಒತ್ತಾಯವಾಗಿದೆ.














