ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ಸಂಘಟನೆಯ ನೇತೃತ್ವ ವಹಿಸಲು ಜಾತಿ ಅಡ್ಡಿಯಾಗುವುದಿಲ್ಲ; ಹಿಂದೂ ಆಗಿರುವುದೇ ಏಕೈಕ ಅರ್ಹತೆ ಎಂದು ಸ್ಪಷ್ಟಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್ ಶತಮಾನೋತ್ಸವ ಸಮಾರಂಭದಲ್ಲಿ ಅವರು ಜಾತಿ, ನಾಯಕತ್ವ ಮತ್ತು ಸಂಘಟನೆಯ ಕಾರ್ಯವೈಖರಿಯ ಕುರಿತು ಮಾತನಾಡಿದರು.
ಜಾತಿ ಮತ್ತು ವೃತ್ತಿಯ ನಡುವಿನ ಸಾಂಪ್ರದಾಯಿಕ ಸಂಬಂಧವನ್ನು ಟೀಕಿಸಿದ ಅವರು, ಇಂದಿನ ಸಂದರ್ಭದಲ್ಲಿ ಜಾತಿಯನ್ನು ಸ್ವಾರ್ಥ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಲಾಗುತ್ತಿದೆ ಎಂದು ಹೇಳಿದರು. ಸಮಾಜದಲ್ಲಿ ಜಾತಿ ತಾರತಮ್ಯ ಇರುವವರೆಗೂ ಮೀಸಲಾತಿ ವ್ಯವಸ್ಥೆ ಅಗತ್ಯವಿದೆ ಎಂದು ಹೇಳಿದ ಅವರು, ತಾರತಮ್ಯ ನಿವಾರಣೆಗೆ ಜನರ ಮನಸ್ಸಿನಿಂದಲೇ ಜಾತಿ ಭಾವನೆ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು.
ತಮಗೆ 75 ವರ್ಷ ವಯಸ್ಸು ತುಂಬಿದ್ದು, ಯಾವುದೇ ಸಮಯದಲ್ಲಾದರೂ ಹುದ್ದೆ ತ್ಯಜಿಸಲು ಸಿದ್ಧನಿದ್ದೇನೆ ಎಂದು ಭಾಗವತ್ ಸಂಘಟನೆಗೆ ತಿಳಿಸಿದ್ದಾರೆ. ಸಾಮಾನ್ಯವಾಗಿ 75 ವರ್ಷ ಪೂರೈಸಿದ ನಂತರ ಯಾವುದೇ ಹುದ್ದೆಯನ್ನು ಅಲಂಕರಿಸದೆ ಸೇವೆ ಸಲ್ಲಿಸುವ ಪರಂಪರೆ ಸಂಘಟನೆಯಲ್ಲಿ ಇದೆ. ನಾನು ಈ ಮಾಹಿತಿಯನ್ನು ಸಂಘಟನೆಗೆ ನೀಡಿದ್ದೇನೆ. ಆದರೆ, ಸಂಘಟನೆ ಕೆಲಸ ಮುಂದುವರಿಸಲು ಸೂಚಿಸಿದೆ. ಸಂಘಟನೆ ಯಾವಾಗ ಹುದ್ದೆ ತ್ಯಜಿಸಲು ಹೇಳುತ್ತದೋ, ಆಗಲೇ ನಾನು ಆ ಹೊಣೆಗಾರಿಕೆಯಿಂದ ಕೆಳಗಿಳಿಯುತ್ತೇನೆ. ಆದರೆ ಸಂಘದ ಕಾರ್ಯದಿಂದ ನಿವೃತ್ತಿ ಇಲ್ಲ ಎಂದು ಅವರು ಹೇಳಿದರು.
ಆರ್‌ಎಸ್‌ಎಸ್ ಮುಖ್ಯಸ್ಥ ಸ್ಥಾನಕ್ಕೆ ಯಾವುದೇ ಚುನಾವಣೆ ನಡೆಯುವುದಿಲ್ಲ. ಪ್ರಾದೇಶಿಕ ಮತ್ತು ಸ್ಥಳೀಯ ನಾಯಕರು ಸಭೆ ಸೇರಿ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುತ್ತಾರೆ. ಜಾತಿ ಯಾವುದೇ ಇರಲಿ, ಸಂಘಟನೆಯ ನೇತೃತ್ವ ವಹಿಸುವ ವ್ಯಕ್ತಿ ಹಿಂದೂ ಆಗಿರುತ್ತಾರೆ ಮತ್ತು ಅತ್ಯುತ್ತಮ ವ್ಯಕ್ತಿಗೇ ಈ ಜವಾಬ್ದಾರಿ ನೀಡಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಕಳೆದ ವರ್ಷ ‘75 ವರ್ಷ ಪೂರೈಸಿದ ನಂತರ ನಾಯಕರು ನಿವೃತ್ತರಾಗಬೇಕು’ ಎಂಬ ಭಾಗವತ್ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಆ ಹೇಳಿಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು.














