ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಹೆಚ್ಚುತ್ತಿರುವ ಹಿನ್ನೆಲೆ, ಈ ಗಂಭೀರ ಬೆಳವಣಿಗೆಯಲ್ಲಿ ಭಾರತ ತಕ್ಷಣ ಮಧ್ಯಪ್ರವೇಶಿಸಬೇಕೆಂದು ಖ್ಯಾತ ಬಲೂಚ್ ನಾಯಕ ಮಿರ್ಯಾರ್ ಬಲೂಚ್ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರಿಗೆ ತುರ್ತು ಪತ್ರ ಬರೆದಿದ್ದಾರೆ.
ಪಾಕಿಸ್ತಾನದ ದಮನಕಾರಿ ಆಡಳಿತಕ್ಕೆ ಒಳಗಾಗಿರುವ ಬಲೂಚಿಸ್ತಾನದ ಜನರು, ಭಾರತ ಕೈಗೊಂಡಿರುವ ‘ಆಪರೇಷನ್ ಸಿಂಧೂರ್’ ಕ್ರಮವನ್ನು ಮೆಚ್ಚಿಕೊಂಡಿದ್ದು, ಪಾಕಿಸ್ತಾನದ ಹಿಡಿತದಿಂದ ಮುಕ್ತಿಗೊಳ್ಳುವ ಹೋರಾಟವನ್ನು ಮುಂದುವರೆಸುತ್ತಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಪತ್ರದಲ್ಲಿ ಮಿರ್ಯಾರ್ ಬಲೂಚ್ ಅವರು, “ಬಲೂಚಿಸ್ತಾನ ಹಲವು ವರ್ಷಗಳಿಂದ ಪಾಕಿಸ್ತಾನದ ನಿಯಂತ್ರಣದಲ್ಲಿ ಹಿಂಸಾಚಾರ ಮತ್ತು ದಮನವನ್ನು ಎದುರಿಸುತ್ತಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಪಾಕಿಸ್ತಾನ ಆಕ್ರಮಿತ ಬಲೂಚಿಸ್ತಾನ ಪ್ರದೇಶದಲ್ಲಿ ಚೀನಾ ತನ್ನ ಸೇನಾ ಪಡೆಗಳನ್ನು ನಿಯೋಜಿಸುವ ಸಾಧ್ಯತೆ ಇದೆ. ಇದು ಬಲೂಚಿಸ್ತಾನ ಮಾತ್ರವಲ್ಲ, ಭಾರತಕ್ಕೂ ಗಂಭೀರ ಭದ್ರತಾ ಸವಾಲಾಗಿ ಪರಿಣಮಿಸಬಹುದು. ಪರಿಸ್ಥಿತಿ ದಿನೇದಿನೇ ಅಪಾಯಕಾರಿಯಾಗಿ ಮಾರ್ಪಡುತ್ತಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಇದಕ್ಕೆ ಜೊತೆಯಾಗಿ, ಭಾರತ ಮತ್ತು ಬಲೂಚಿಸ್ತಾನದ ನಡುವೆ ಪರಸ್ಪರ ಸಹಕಾರ ಅತ್ಯವಶ್ಯಕವಾಗಿದ್ದು, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸಲು ಹಾಗೂ ಪ್ರಾದೇಶಿಕ ಸಾರ್ವಭೌಮತ್ವವನ್ನು ರಕ್ಷಿಸಲು ಭಾರತ ತಕ್ಷಣ ಹಾಗೂ ದೃಢವಾಗಿ ಮಧ್ಯಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.














