ಬೆಂಗಳೂರು: ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರೂ ಇ-ಖಾತಾ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ ಎಂಬ ದೂರುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಸ್ಪಷ್ಟಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಬಿಎ ಮುಖ್ಯ ಆಯುಕ್ತ ಎಂ.ಮಹೇಶ್ವರ್ ರಾವ್, ಇ-ಖಾತಾ ಪಡೆಯಲು ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಸ್ವತ್ತು ಮಾಲೀಕರಿಗೆ ನೆರವಾಗುವ ಉದ್ದೇಶದಿಂದಲೇ ರಾಜ್ಯ ಸರ್ಕಾರ ಇ-ಖಾತಾ ಯೋಜನೆಯನ್ನು ಜಾರಿಗೆ ತಂದಿದ್ದು, ಯಾರಿಗಾದರೂ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ಅವುಗಳನ್ನು ಪರಿಹರಿಸಲು ಪ್ರಾಧಿಕಾರ ಬದ್ಧವಾಗಿದೆ ಎಂದರು.
ಇ-ಖಾತಾ ಅರ್ಜಿಗಳ ತಿರಸ್ಕಾರದ ಕುರಿತು ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿದ್ದು, ಈ ಸಂಬಂಧ ಆಡಿಟ್ ನಡೆಸಿ ಸಮಸ್ಯೆಯ ಮೂಲ ಪತ್ತೆ ಹಚ್ಚಲಾಗುವುದು ಎಂದು ಅವರು ಹೇಳಿದರು.
ಈ ನಡುವೆ, ಇ-ಖಾತಾ ನೀಡುವ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಉಪ ಆಯುಕ್ತ ಡಿ.ಕೆ.ಬಾಬು ಹಾಗೂ ಬಿಟಿಎಂ ಲೇಔಟ್‌ನ ಕಂದಾಯ ಅಧಿಕಾರಿ ವರಲಕ್ಷ್ಮಿ ಅವರನ್ನು ಅಮಾನತುಗೊಳಿಸಿರುವ ಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಜಿಬಿಎ ಪುರಸಭೆ ಅಧಿಕಾರಿಗಳು ಮತ್ತು ನೌಕರರ ಕಲ್ಯಾಣ ಸಂಘದ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು, ಕಂದಾಯ ಇಲಾಖೆಯ ನೌಕರರ ಮೇಲೆ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ಅವರು ಅಸಭ್ಯವಾಗಿ ವರ್ತಿಸುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಹೆಚ್ಚುತ್ತಿರುವ ಕೆಲಸದ ಒತ್ತಡದಿಂದ ಅನೇಕ ನೌಕರರು ರಾಜೀನಾಮೆ ನೀಡುವ ಸ್ಥಿತಿಗೆ ತಲುಪಿದ್ದಾರೆ ಎಂಬುದನ್ನೂ ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರು ಜಿಬಿಎ ಆಯುಕ್ತರನ್ನು ಭೇಟಿ ಮಾಡಿ, ವಿಶೇಷ ಆಯುಕ್ತರ ವಿರುದ್ಧ ದೂರು ಸಲ್ಲಿಸಿದರು. ಅಮಾನತುಗೊಳಿಸಲಾದ ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ತಕ್ಷಣವೇ ರದ್ದುಗೊಳಿಸುವಂತೆ ಒತ್ತಾಯಿಸಿದರು. ಬೇಡಿಕೆ ಈಡೇರದಿದ್ದರೆ ಸಾಮೂಹಿಕ ರಾಜೀನಾಮೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.














