ಬೆಂಗಳೂರು: ರೌಡಿಶೀಟರ್ ವಿ.ಜಿ.ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡವು (ಎಸ್‌ಐಟಿ), ಎಫ್ಐಆರ್‌ನಲ್ಲಿ ಹೆಸರು ಉಲ್ಲೇಖಗೊಂಡಿರುವ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಹೊರತುಪಡಿಸಿ ಇತರ 18 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.
ನಗರದ ನ್ಯಾಯಾಲಯಕ್ಕೆ ಸೋಮವಾರ ಸಲ್ಲಿಸಲಾದ ಈ ಚಾರ್ಜ್‌ಶೀಟ್, ಜುಲೈ 15ರಂದು ನಡೆದ ಬಿಕ್ಲು ಶಿವ (40) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ್ದು, ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೋಕಾ) ಜಾರಿಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಈ ವರ್ಷದ ಜುಲೈನಲ್ಲಿ ಭಾರತಿ ನಗರದಲ್ಲಿ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಬಿಕ್ಲು ಶಿವನನ್ನು ಮಾರಕವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಹಳೆಯ ಆಸ್ತಿ ವಿವಾದವೇ ಈ ಹತ್ಯೆಗೆ ಕಾರಣ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಕರಣದ ಎಫ್ಐಆರ್‌ನಲ್ಲಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯಾಗಿ ಹಾಗೂ ಗ್ಯಾಂಗ್‌ಸ್ಟರ್ ಜಗದೀಶ್ ಪದ್ಮನಾಭ ಅಲಿಯಾಸ್ ಜಗ (45) ಅವರನ್ನು ಪ್ರಮುಖ ಆರೋಪಿಯಾಗಿ ಗುರುತಿಸಲಾಗಿದೆ.
ಒಟ್ಟು 4,236 ಪುಟಗಳ ಚಾರ್ಜ್‌ಶೀಟ್ ಅನ್ನು ಸಿಐಡಿ ಅಧಿಕಾರಿಗಳು ಸೋಮವಾರ ಸಂಜೆ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಮೊದಲನೇ ಆರೋಪಿಯಿಂದ ನಾಲ್ಕನೇ ಹಾಗೂ ಆರನೇ ಆರೋಪಿಯಿಂದ 19ನೇ ಆರೋಪಿವರೆಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಐದನೇ ಆರೋಪಿಯಾಗಿರುವ ಶಾಸಕ ಬೈರತಿ ಬಸವರಾಜ್ ವಿರುದ್ಧ ಸದ್ಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗಿಲ್ಲ.
ಚಾರ್ಜ್‌ಶೀಟ್‌ನ ಪ್ರಕಾರ, ಶಾಸಕ ಬೈರತಿ ಬಸವರಾಜ್ ಸದ್ಯ ತಲೆಮರೆಸಿಕೊಂಡಿದ್ದು, ಅವರ ಬಂಧನವಾಗಿಲ್ಲ ಹಾಗೂ ವಿಚಾರಣೆ ಕೂಡ ನಡೆದಿಲ್ಲ. ಹೀಗಾಗಿ ಅವರ ವಿರುದ್ಧ ತನಿಖೆ ಮುಂದುವರಿದಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ರೀತಿ 20ನೇ ಆರೋಪಿಯಾದ ಅಜಿತ್ ವಿರುದ್ಧವೂ ತನಿಖೆ ಮುಂದುವರಿದಿದೆ ಎಂದು ತಿಳಿಸಲಾಗಿದೆ.
ಪ್ರಮುಖ ಆರೋಪಿ ಜಗ ಅವರ ಸಹಚರರಾದ ವಿಮಲ್ ರಾಜ್, ಕಿರಣ್ ಕೃಷ್ಣ, ಮದನ್ ಕೆ ಮತ್ತು ಪ್ರದೀಪ್ ಕೆ ಅವರನ್ನು ಸಹ ಆರೋಪಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ನೂ, ಕೊಲೆಯಾದ ಒಂದು ದಿನದ ನಂತರ ಅಂದರೆ ಜುಲೈ 16 ರಂದು ಕಿರಣ್ ಕೃಷ್ಣ, ಪ್ರದೀಪ್, ವಿಮಲ್ ರಾಜ್, ಮದನ್ ಕೆ ಹಾಗೂ ಸ್ಯಾಮ್ಯುಯೆಲ್ ವಿಕ್ಟರ್ ಎಂಬ ಐವರು ಅಪರಾಧದಲ್ಲಿ ಭಾಗಿಯಾಗಿರುವುದಾಗಿ ಹೇಳಿಕೊಂಡು ಪೊಲೀಸರ ಮುಂದೆ ಶರಣಾಗಿದ್ದರು.














