ನವದೆಹಲಿ: ದೇಶದ್ರೋಹಿಗಳು ಯಾರು ಮತ್ತು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿರುವವರು ಯಾರು ಎಂಬುದರ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.
ಛತ್ತೀಸ್ಗಢದ ಬಸ್ತರ್ನಲ್ಲಿ ಅರೆಸೈನಿಕ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ನರೇಂದ್ರ ಮೋದಿ, ದೇಶದಲ್ಲಿ ನಕ್ಸಲ್ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಲಾಗಿದೆ. ಆದರೆ ನಕ್ಸಲ್ ಮನಸ್ಥಿತಿ ಹೊಂದಿರುವವರು ಜನರನ್ನು ಪ್ರಚೋದಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಂತಹವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಪ್ರತಿಪಕ್ಷಗಳ ವಿರುದ್ಧವೂ ಪರೋಕ್ಷವಾಗಿ ಟೀಕೆ ಮಾಡಿದ್ದರು.
ಪ್ರಧಾನಿ ಮೋದಿಯವರ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
‘ಆತ್ಮೀಯ ಅರೆಸೈನಿಕ ಪಡೆಗಳ ಸಿಬ್ಬಂದಿಗಳೇ, ಪ್ರಧಾನಿಯವರ ಸುಳ್ಳುಗಳನ್ನು ನೀವು ನಂಬಿಲ್ಲ ಎಂಬುದು ನಿಮ್ಮ ಮುಖಗಳೇ ಹೇಳುತ್ತಿದ್ದವು. ಅವರು ನಮ್ಮನ್ನು ನಕ್ಸಲರು ಎಂದು ಕರೆದಿದ್ದಾರೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
‘ನಾನು ಈ ಹಿಂದೆ ಹಾಕಿದ್ದ ಸವಾಲು ಇನ್ನೂ ಹಾಗೆಯೇ ಇದೆ. ಯಾರು ದೇಶದ್ರೋಹಿಗಳು ಮತ್ತು ಯಾರು ವಿದೇಶಿ ಶಕ್ತಿಗಳ ನಿಯಂತ್ರಣದಲ್ಲಿದ್ದಾರೆ ಎಂಬುದರ ಕುರಿತು ನನ್ನೊಂದಿಗೆ ಚರ್ಚಿಸಲು ಪ್ರಧಾನಿ ಬರಲಿ. ಯಾವಾಗ ಬೇಕಾದರೂ, ಎಲ್ಲಿಗೆ ಬೇಕಾದರೂ ಬರಬಹುದು’ ಎಂದು ಅವರು ಸವಾಲು ಹಾಕಿದ್ದಾರೆ.
‘ಆ ಚರ್ಚೆಯ ನಂತರ ಯಾವುದೇ ಯೋಧರ ಎದುರು ಮತ್ತೆ ನಿಲ್ಲುವ ಧೈರ್ಯ ಪ್ರಧಾನಿಯವರಿಗೆ ಇರುವುದಿಲ್ಲ. ಇದು ನನ್ನ ಭರವಸೆ’ ಎಂದು ರಾಹುಲ್ ಗಾಂಧಿ ತಮ್ಮ ಪೋಸ್ಟ್ನಲ್ಲಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಮತ್ತು ರಾಹುಲ್ ಗಾಂಧಿ ನಡುವಿನ ಈ ವಾಕ್ಸಮರ ಇದೀಗ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.














