ಬೆಂಗಳೂರು, ಜು. 11: ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಕೆ.ಚೆನ್ನಸಂದ್ರ ವಾರ್ಡಿಗೆ ಒಳಪಟ್ಟ ಕನಕನಗರದಲ್ಲಿ ಬೆಂಗಳೂರು ಪೂರ್ವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಮೋಹನ್ ಬಾಬು ಅವರ ನೇತೃತ್ವದಲ್ಲಿ ಬಡ ಹಾಗೂ ಅಗತ್ಯವಿರುವ ನೂರಾರು ಕುಟುಂಬಗಳಿಗೆ ಉಚಿತವಾಗಿ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸಲಾಯಿತು.
ಕಾಂಗ್ರೆಸ್ ನಾಯಕ ಹಾಗೂ ಕೆ.ಚೆನ್ನಸಂದ್ರ ವಾರ್ಡಿನ ಚುನಾವಣಾ ಆಕಾಂಕ್ಷಿ ವಿ. ರವಿ ಅವರ ಆಶ್ರಯದಲ್ಲಿ ನಡೆದ ಈ ಜನಸೇವಾ ಕಾರ್ಯಕ್ರಮದಲ್ಲಿ ಸ್ಥಳೀಯ ನಿವಾಸಿಗಳಿಗೆ ಕುಡಿಯುವ ನೀರಿನ ಕ್ಯಾನ್‌ಗಳನ್ನು ವಿತರಿಸುವ ಮೂಲಕ ಬೇಸಿಗೆ ಹಾಗೂ ನೀರಿನ ಕೊರತೆಯಿಂದ ಸಂಕಷ್ಟದಲ್ಲಿದ್ದ ಕುಟುಂಬಗಳಿಗೆ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಹೊರಮಾವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ವೆಂಕಟೇಶ್, ಸಮಾಜ ಸೇವಕರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಅಗರ ಪ್ರಕಾಶ್, ಕಾಂಗ್ರೆಸ್ ಮುಖಂಡರಾದ ಬೀರಣ್ಣ, ಸುನೀಲ್ ಸೇರಿದಂತೆ ಹಲವು ಸ್ಥಳೀಯ ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.
ಕನಕನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಆಯೋಜಿಸಲಾದ ಈ ಸೇವಾ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ಇಂತಹ ಜನಪರ ಕಾರ್ಯಕ್ರಮಗಳು ಮುಂದುವರಿಯಬೇಕು ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಪಟ್ಟರು.














