ಬೆಂಗಳೂರು: ಒಳಮೀಸಲಾತಿಯನ್ನು ಒಳಗೊಂಡ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು ಮತ್ತು ಮೋದಿ ಸರ್ಕಾರದ ಮೇಲೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಸಂಸದರು ಮತ್ತು ಬಿಜೆಪಿ-ಜೆಡಿಎಸ್ ಸಂಸದರು ಒತ್ತಡ ಹೇರಿ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ, ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (KDSS) ಸರ್ಕಾರವನ್ನು ಆಗ್ರಹಿಸಿದೆ.
ಪತ್ರಿಕಾ ಘೋಷ್ಟಿಯಲ್ಲಿ ಮಾತನಾಡಿದ ದಸಂಸ ಮುಖಂಡರು, “ಕಳೆದ ಮೂರು ದಶಕಗಳಿಂದಲೂ ಒಳಮೀಸಲಾತಿ ಹೋರಾಟ ನಡೆದು ಬಂದಿದೆ. ಶೋಷಿತ ಸಮುದಾಯಗಳಿಗೆ ನ್ಯಾಯ ಎಂದಿಗೂ ಬೇಗ ಸಿಗಲಾರದು ಎಂಬುದಕ್ಕೆ ಒಳಮೀಸಲಾತಿ ವಿಚಾರ ಸ್ಪಷ್ಟ ಉದಾಹರಣೆಯಾಗಿದೆ. EWS 10% ಮೀಸಲಾತಿಯನ್ನು ‘ನಾ ಮುಂದು ತಾ ಮುಂದು’ ಎಂದು ಸಂಸತ್ತಿನಲ್ಲಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಮೂರೇ ದಿನದಲ್ಲಿ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮತದಿಂದ ಜಾರಿಗೊಳಿಸಿದವು. ಅದೇ ರೀತಿಯಲ್ಲಿ ‘ಉಷಾ ಮೆಹ್ರಾ’ ಸಮಿತಿ ಸೂಚಿಸಿದಂತೆ ಸಂವಿಧಾನ ತಿನ್ನುಪಡಿ ಮಾಡಿ ಒಳಮೀಸಲಾತಿ ಜಾರಿಗೊಳಿಸಬಹುದಿತ್ತು. ಆದರೆ, ಯುಪಿಎ ಹಾಗೂ ಎನ್ಡಿಎ ಸರ್ಕಾರಗಳೆರಡೂ ಕಿವಿಗೆ ಹಾಕಿಕೊಳ್ಳಲೇ ಇಲ್ಲ. ಕೊನೆಗೆ ಸ್ವತಃ ಸುಪ್ರೀಂಕೋರ್ಟ್ ಒಳಮೀಸಲಾತಿ ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆಯೆಂದು ತೀರ್ಪು ನೀಡಿದ ನಂತರ ರಹದಾರಿ ತೆರೆದುಕೊಂಡಿತು” ಎಂದು ಹೇಳಿದರು.
“ಇದಕ್ಕೂ ಮುಂಚೆ 2023ರಲ್ಲಿಯೇ ದಸಂಸವು ಡಿಸೆಂಬರ್ 6 ರಂದು ಒಳಮೀಸಲಾತಿ ಜಾರಿಗೊಳಿಸಲು ಒತ್ತಾಯಿಸಿತ್ತು. ಅದಕ್ಕೆ ಮನ್ನಿಸಿ ಕಾಂಗ್ರೆಸ್ ಪಕ್ಷವೂ ಪಣಾಳಿಕೆಯಲ್ಲಿ ಒಳಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಿತ್ತು. ಅಷ್ಟಾಗಿಯೂ ಕರ್ನಾಟಕ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಸಾಕಷ್ಟು ಸಮಯ ತೆಗೆದುಕೊಂಡಿತು. ಇದರಿಂದಾಗಿ ದಲಿತ ಜಾತಿಗಳೊಳಗೇ ಪರವಿರೋಧದ ಚರ್ಚೆಗಳು ಹುಟ್ಟುಲು ಕಾರಣವಾಯಿತು. ಅದೇನೇ ಇರಲಿ, ಕೊನೆಗೂ ಕಳೆದ ಸಂಪುಟ ಸಭೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಒಳಮೀಸಲಾತಿಯನ್ನು ಶೇ.15ರೊಳಗೇ ಜಾರಿಗೊಳಿಸಲು ತೀರ್ಮಾನಿಸಿದೆ. ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಎಲ್ಲರಿಗೂ ಸಲ್ಲುವಂತಹ ಮತ್ತೊಂದು ಸೂತ್ರವನ್ನು ಹುಡುಕುವುದು ಅಸಾಧ್ಯವೆಂದೇ ತೋರುತ್ತಿದೆ” ಎಂದು ಹೇಳಿದರು.
“ಪರಿಶಿಷ್ಟ ಜಾತಿಗಳಿಗೆ ಶೇ.17ರಷ್ಟು ಮೀಸಲಾತಿ ದೊರಕಬೇಕು. ಆದರೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಶೇ.50ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಯಾವುದೇ ರೀತಿಯ ಆಲೋಚನೆ ಮಾಡಿದಂತಿಲ್ಲ. ತಮಿಳುನಾಡು ಮಾದರಿಯಲ್ಲಿ ಸಂವಿಧಾನದ ಶೆಡ್ಯೂಲ್ 9ಕ್ಕೆ ಪರಿಶಿಷ್ಟರ ಮೀಸಲಾತಿಯನ್ನು ಸೇರಿಸುವ ಕ್ರಮವನ್ನು ಸಹ ಕೈಗೊಂಡಿಲ್ಲ. ಇದು ಸ್ಪಷ್ಟವಾದ ದಲಿತ ವಿರೋಧಿ ನಡೆಯಾಗಿದೆ. ಮೇಲ್ಮಾತಿಗಳಿಗೆ ಒಂದು ನ್ಯಾಯ ಮತ್ತು ತಳಸಮುದಾಯಗಳಿಗೆ ಒಂದು ನ್ಯಾಯ ಮಾಡುವಲ್ಲಿ ಮೋದಿ ಸರ್ಕಾರ ನಿಷ್ಕ್ರಿಯವಾಗಿದೆ. ಈ ಅನ್ಯಾಯ ಸಲ್ಲದು. ಈ ಕೂಡಲೇ ಮೋದಿ ಸರ್ಕಾರದ ಮೇಲೆ ರಾಜ್ಯದ ಕಾಂಗ್ರೆಸ್ ಸರ್ಕಾರ ಹಾಗೂ ಸಂಸದರು ಮತ್ತು ಬಿಜೆಪಿ-ಜೆಡಿಎಸ್ ಸಂಸದರು ಒತ್ತಡ ಹೇರಿ ಪರಿಶಿಷ್ಟರ ಮೀಸಲಾತಿ ಪ್ರಮಾಣವನ್ನು ಶೇ.56ಕ್ಕೆ, ಹೆಚ್ಚಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕು” ಎಂದು ದಲಿತ ಮುಖಂಡರು ಆಗ್ರಹಿಸಿದರು.
“ಒಳಮೀಸಲಾತಿ ಜಾರಿಯು ತಾರ್ಕಿಕ ಅಂತ್ಯ ಕಂಡಂತಾಗಿದೆ. ಮುಂಬರುವ ದಿನಗಳಲ್ಲಿ ಅಲೆಮಾರಿ ಸಮುದಾಯಗಳಿಗೂ ನ್ಯಾಯ ಸಲ್ಲುವಂತಹ ತಿದ್ದುಪಡಿಗಳನ್ನು ಮಾಡಬೇಕಾಗುತ್ತದೆ” ಸರ್ಕಾರವನ್ನು ಒತ್ತಾಯಿಸಿದರು.
ಆದಷ್ಟು ಬೇಗ ಒಳ ಮೀಸಲಾತಿಯನ್ನು ಒಳಗೊಂಡ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಬೇಕೆಂದು ಒತ್ತಾಯಿಸಿರುವ ದಲಿತ ಸಂಘರ್ಷ ಸಮಿತಿಯು ಈ ಕಳಗಿನ ಹಕ್ಕೊತ್ತಾಯಗಳನ್ನು ಸಹ ಮಂಡಿಸಿದೆ.
ಪಿಟಿಸಿಎಲ್ ಕಾಯ್ದೆಯನ್ನು ಕಾನೂನು ಬದ್ರವಾಗಿ ಜಾರಿಗೊಳಿಸಬೇಕು. ಅಧಿಕಾರಿಗಳ ಆಟಾಟೋಪಕ್ಕೆ ಕಡಿವಾಣ ಹಾಕಬೇಕು.
SCSP/TSP ಹಣವನ್ನು ಯಾವುದೇ ಕಾರಣಕ್ಕೂ ‘ಗ್ಯಾರಂಟಿ’ ಯೋಜನೆಗೆ ಬಳಸಿಕೊಳ್ಳಬಾರದು. ಈಗಾಗಲೇ ಬಳಸಿಕೊಂಡಿರುವ ಹಣವನ್ನು ಹಿಂದಿರುಗಿಸಬೇಕು.
ಅಲೆಮಾರಿ ಸಮುದಾಯಗಳಿಗೆ ಮಾತ್ರ ಸ್ಥಾನವಿರುವಂತೆ ನಿಗಮ ಮಂಡಳಿ ರಚಿಸಬೇಕು.
ಅಲೆಮಾರಿ ಸಮುದಾಯಗಳಿಗೆ ಪ್ರತಿ ವರ್ಷ 500 ಕೋಟಿ ವಿಶೇಷ ಪ್ಯಾಕೇಜ್ ನೀಡಬೇಕು.
ಉನ್ನತ ವ್ಯಾಸಂಗಕ್ಕೆ ಪರಿಶಿಷ್ಟರ ಮಕ್ಕಳಿಗೆ ನೀಡುವ ಶುಲ್ಕ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ನೇರವಾಗಿ ಕಾಲೇಜಿಗೆ ನೀಡಬೇಕು. ವಿದ್ಯಾರ್ಥಿಗಳಿಂದ ಮೊದಲು ವಸೂಲು ಮಾಡಿ ನಂತರ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡುವ ಪದ್ಧತಿ ನಿಲ್ಲಿಸಬೇಕು.
ರೋಹಿತ್ ವೇಮುಲಾ ಕಾಯ್ದೆ ಮತ್ತು ‘ಇವು ನಮ್ಮವ ಇವ ನಮ್ಮವ’ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೊಳಿಸಬೇಕು.
ಖಾಸಗಿಯಲ್ಲಿ ಮೀಸಲಾತಿ ತರುವ ಯೋಜನೆಗೆ ಮತ್ತೆ ಚಾಲನೆ ನೀಡಬೇಕು.
ಐಪಿಡಿ ಸಾಲಪ್ಪ ವರದಿಯನ್ವಯ ಸರ್ಕಾರಿ ಸುತ್ತೋಲೆ ಅಂಶ 6ನ್ನು ಜಾರಿಮಾಡಬೇಕು. ಕಸ ವಿಲೇವಾರಿ ಮಾಡುವ ಆಟೋ ಚಾಲಕರು, ಸಹಾಯಕರು ಮತ್ತು ಲೋಡರ್ ಗಳನ್ನು ಖಾಯಂ ಮಾಡಬೇಕು. ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿಷೇಧ ಮಾಡಬೇಕು.
ದಲಿತರ ಮೇಲೆ ನಡೆದಿರುವ ದೌರ್ಜನ್ಯಗಳ ತ್ವರಿತ ವಿಲೇವಾರಿಗಾಗಿ ಜಿಲ್ಲೆಗೊಂದು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಹಾಗೂ ನೂತನ ಕಟ್ಟಡ ಮತ್ತು ಸಿಬ್ಬಂಧಿಗಳನ್ನು ಒದಗಿಸಬೇಕು.














