ಅಮೆರಿಕದೊಂದಿಗೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಗಂಭೀರವಾಗಿ ಪ್ರಶ್ನಿಸಿದ್ದಾರೆ. ಈ ಒಪ್ಪಂದವು ಭಾರತೀಯ ರೈತರ ಹಿತಾಸಕ್ತಿಗೆ ವಿರುದ್ಧವಾಗಿದ್ದು, ದೇಶದ ಕೃಷಿ ಸ್ವಾಯತ್ತತೆಗೆ ಧಕ್ಕೆಯಾಯಿತೇ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.
ತಳೀಯವಾಗಿ ಮಾರ್ಪಡಿಸಿದ (Genetically Modified) ಬೆಳೆಗಳು, ವ್ಯಾಪಾರೇತರ ಅಡೆತಡೆಗಳ ತೆರವು ಮತ್ತು ಅಮೆರಿಕದ ಕೃಷಿ ಉತ್ಪನ್ನಗಳಿಗೆ ಭಾರತದಲ್ಲಿ ಪ್ರವೇಶ ಕಲ್ಪಿಸುವ ವಿಷಯಗಳ ಬಗ್ಗೆ ಅವರು ಸ್ಪಷ್ಟನೆ ಕೇಳಿದ್ದಾರೆ.
ರಾಹುಲ್ ಗಾಂಧಿ ಎತ್ತಿದ 5 ಪ್ರಶ್ನೆಗಳು:
1) DDG (Dried Distillers Grains) ಆಮದು ಅರ್ಥವೇನು?
ಅಮೆರಿಕನ್ ತಳೀಯ ಜೋಳದಿಂದ ತಯಾರಿಸಿದ ಬಟ್ಟಿ ಧಾನ್ಯಗಳನ್ನು ಭಾರತೀಯ ಜಾನುವಾರುಗಳಿಗೆ ನೀಡಲಾಗುತ್ತದೆಯೇ? ಇದರಿಂದ ನಮ್ಮ ಡೈರಿ ಕ್ಷೇತ್ರ ಅಮೆರಿಕನ್ ಕೃಷಿ ಉದ್ಯಮದ ಮೇಲೆ ಅವಲಂಬಿತವಾಗುತ್ತದೆಯೇ?
2) GM ಸೋಯಾಬೀನ್ ಎಣ್ಣೆ ಆಮದು ಪರಿಣಾಮ?
ಅಮೆರಿಕದಿಂದ GM ಸೋಯಾಬೀನ್ ಎಣ್ಣೆ ಆಮದು ಅನುಮತಿಸಿದರೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಸೇರಿದಂತೆ ದೇಶದ ಸೋಯಾಬೀನ್ ರೈತರಿಗೆ ಏನು ಆಗಲಿದೆ? ಮತ್ತೊಂದು ಬೆಲೆ ಕುಸಿತವನ್ನು ಅವರು ಹೇಗೆ ಎದುರಿಸುತ್ತಾರೆ?
3) “ಹೆಚ್ಚುವರಿ ವಸ್ತುಗಳು” ಎಂದರೆ ಏನು?
ಒಪ್ಪಂದದಲ್ಲಿ ಉಲ್ಲೇಖಿಸಿರುವ ಹೆಚ್ಚುವರಿ ವಸ್ತುಗಳಲ್ಲಿ ನಿಖರವಾಗಿ ಏನು ಸೇರಿದೆ? ಮುಂದೆ ದ್ವಿದಳ ಧಾನ್ಯಗಳು ಸೇರಿದಂತೆ ಇತರ ಬೆಳೆಗಳಿಗೆ ಅಮೆರಿಕ ಒತ್ತಡ ತರಲಿದೆಯೇ
4) ವ್ಯಾಪಾರೇತರ ಅಡೆತಡೆಗಳ ತೆರವು ಅರ್ಥವೇನು?
ಇದರಿಂದ ಭಾರತವು GM ಬೆಳೆಗಳ ವಿರುದ್ಧದ ನಿಲುವನ್ನು ಮೃದುಗೊಳಿಸಬೇಕಾಗುತ್ತದೆಯೇ? ಸಂಗ್ರಹಣಾ ನೀತಿ ದುರ್ಬಲವಾಗುತ್ತದೆಯೇ ಅಥವಾ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಬೋನಸ್ಗಳಿಗೆ ಒತ್ತಡ ಬರುತ್ತದೆಯೇ?
5) ಒಪ್ಪಂದ ವಿಸ್ತರಣೆ ಬಗ್ಗೆ ಸುರಕ್ಷತೆ ಇದೆಯೇ?
ಈ ಒಪ್ಪಂದ ಜಾರಿಗೆ ಬಂದ ನಂತರ ಅದು ವರ್ಷದಿಂದ ವರ್ಷಕ್ಕೆ ವಿಸ್ತರಿಸುವುದನ್ನು ಹೇಗೆ ತಡೆಯಲಾಗುತ್ತದೆ? ಯಾವುದೇ ರಕ್ಷಣೆ ಕ್ರಮಗಳಿವೆಯೇ? ಅಥವಾ ಹಂತ ಹಂತವಾಗಿ ಇನ್ನಷ್ಟು ಬೆಳೆಗಳು ಸೇರಿಸಲ್ಪಡಲಿವೆಯೇ?
ಇದು ಇಂದಿನ ಪ್ರಶ್ನೆಯಷ್ಟೇ ಅಲ್ಲ, ಭವಿಷ್ಯದ ಪ್ರಶ್ನೆಯೂ ಹೌದು. ಭಾರತದ ಕೃಷಿ ಕ್ಷೇತ್ರದಲ್ಲಿ ಇನ್ನೊಂದು ದೇಶದ ಪ್ರಭಾವ ಹೆಚ್ಚಲು ನಾವು ಅವಕಾಶ ಮಾಡಿಕೊಡುತ್ತಿದ್ದೇವೆಯೇ? ಎಂದು ಅವರು ಎಕ್ಸ್ನಲ್ಲಿ ಪ್ರಕಟಿಸಿದ ಪೋಸ್ಟ್ನಲ್ಲಿ ಪ್ರಶ್ನಿಸಿದ್ದಾರೆ.














