ಬೆಂಗಳೂರು: “ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಅಧಿಕಾರದಲ್ಲಿರುವುದೇ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯದ ವಿರುದ್ಧ ದ್ರೋಹದ ನೀತಿ ಅನುಸರಿಸಲು ಏಕೈಕ ಕಾರಣವಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆರೋಪ ಮಾಡಿದ್ದಾರೆ.
“ಕಳೆದ ಎರಡುವರೆ ವರ್ಷಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನ್ಯಾಯಯುತ ತೆರಿಗೆ ಪಾಲು ನೀಡದೆ ವಂಚಿಸುತ್ತಿರುವುದಲ್ಲದೆ ಕರ್ನಾಟಕದ ನೀರಾವರಿ, ರೈಲ್ವೆ, ಹೆದ್ದಾರಿ ಸೇರಿದಂತೆ ಎಲ್ಲಾ ತೆರನಾದ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಮತ್ತು ಅನುಮತಿ ನೀಡದೆ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ” ಎಂದು ಅವರು ಹೇಳಿದ್ದಾರೆ.
“ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಗೆ ಮತ ನೀಡದಿದ್ದರೆ ಪ್ರಧಾನಮಂತ್ರಿ ಮೋದಿಯವರ ಆಶೀರ್ವಾದ ಸಿಗುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೀಡಿದ್ದ ಬೆದರಿಕೆಯನ್ನು ಕೇಂದ್ರ ಸರ್ಕಾರ ಇದೀಗ ಕಾರ್ಯರೂಪಕ್ಕೆ ತಂದಂತಿದೆ” ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
“ಬಿಜೆಪಿಯಿಂದ ಗೆದ್ದು ಸಂಸದರಾಗಿ, ಕೇಂದ್ರದಲ್ಲಿ ಮಂತ್ರಿಗಳಾಗಿರುವ ಕರ್ನಾಟಕದ ನಾಯಕರು ಪ್ರಧಾನಿಯ ಎದುರು ಈ ಮಲತಾಯಿ ಧೋರಣೆಯ ವಿರುದ್ಧ ಮಾತನಾಡುವ ಧೈರ್ಯವನ್ನೂ, ಮತ ನೀಡಿದ ಜನರ ಬಗ್ಗೆ ಕಾಳಜಿಯನ್ನೂ ತೋರಿಸುತ್ತಿಲ್ಲ. ಸಾರ್ವಜನಿಕ ವೇದಿಕೆಯಲ್ಲಿ ದ್ವೇಷದ ಮಾತು ಆಡುತ್ತಾರಾದರೂ, ಮೋದಿಯವರನ್ನು ಕಂಡೊಡನೆ ಅವರಿಗೆ ಕೈಕಾಲು ನಡುಗುತ್ತದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.
“ಇದೀಗ ಕನ್ನಡಿಗರ ಮೇಲೆ ಅನ್ಯಾಯ ನಡೆಯುತ್ತಿದ್ದರೂ ಅದರ ವಿರುದ್ಧ ಧ್ವನಿ ಎತ್ತದೇ, ಕೇವಲ ಸ್ವಹಿತಕ್ಕಾಗಿ ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ಜೆಡಿಎಸ್ ಮತ್ತು ಅದರ ನಾಯಕ ಎಚ್.ಡಿ.ಕುಮಾರಸ್ವಾಮಿ ನಡೆ ಅಸಹ್ಯ ಹುಟ್ಟಿಸುವಂತಿದೆ. ಒಂದು ಸಚಿವ ಸ್ಥಾನಕ್ಕಾಗಿ ಇಷ್ಟೆಲ್ಲಾ ತಲೆಬಾಗಬೇಕೇ? ಇದು ನನ್ನೊಬ್ಬನ ಪ್ರಶ್ನೆಯಲ್ಲ, ನೊಂದ ಪ್ರತಿಯೊಬ್ಬ ಕನ್ನಡಿಗನ ಪ್ರಶ್ನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.














