2025ರ ಅಂತ್ಯದ ವೇಳೆಗೆ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಭಾರೀ ಕುಸಿತವನ್ನು ಕಂಡಿತು. ಒಂದು ಡಾಲರ್ ಮೌಲ್ಯ ರೂ.91ರ ಹತ್ತಿರ ತಲುಪಿದ್ದು, ದೇಶದ ಆರ್ಥಿಕ ವಲಯದಲ್ಲಿ ಚರ್ಚೆಗೆ ಕಾರಣವಾಯಿತು.
ರೂಪಾಯಿ ಕುಸಿತವು ರಫ್ತುದಾರರಿಗೆ ಲಾಭಕರವಾಗಿದ್ದರೂ, ಆಮದುದಾರರಿಗೆ ದೊಡ್ಡ ಹೊಡೆತ ನೀಡಿತು. ಜೊತೆಗೆ, ಬೆಲೆ ಏರಿಕೆಯ ಆತಂಕವೂ ದೇಶದ ಮೇಲೆ ಮಿಂಚಿತ್ತು.
ಆದರೆ ಕೆಲವೇ ದಿನಗಳಲ್ಲಿ ರೂಪಾಯಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡು ಮಾರುಕಟ್ಟೆಗೆ ತುಸು ನಿರಾಳತೆಯನ್ನು ತಂದಿತು.
ಇದೀಗ 2026ರಲ್ಲಿ ಭಾರತೀಯ ರೂಪಾಯಿಯ ಸ್ಥಿತಿಗತಿಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ವರದಿಯನ್ನು ಬಿಡುಗಡೆ ಮಾಡಿದೆ.
RBI ವರದಿ ಪ್ರಕಾರ,
2025ರಲ್ಲಿ ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಸುಮಾರು ಶೇ.5 ರಷ್ಟು ಕುಸಿತ ಕಂಡಿದೆ. 2022 ರಿಂದಲೇ ರೂಪಾಯಿ ಒತ್ತಡದಲ್ಲಿದ್ದರೂ, ಕಳೆದ ವರ್ಷವೇ ಅತ್ಯಂತ ತೀವ್ರ ಕುಸಿತವನ್ನು ಅನುಭವಿಸಿದೆ. ಅಷ್ಟೇ ಅಲ್ಲದೆ, 2025 ರಲ್ಲಿ ಏಷ್ಯಾದಲ್ಲೇ ಅತಿಹೆಚ್ಚು ಕುಸಿದ ಕರೆನ್ಸಿಯಾಗಿ ಭಾರತೀಯ ರೂಪಾಯಿ ದಾಖಲಾಗಿದೆ.
ರೂಪಾಯಿ ಕುಸಿತಕ್ಕೆ ಕಾರಣವೇನು?
• ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲೆ ವಿಧಿಸಿದ 50 ಶೇಕಡಾ ಸುಂಕ (ಟ್ಯಾರಿಫ್) ಪ್ರಮುಖ ಕಾರಣವಾಗಿದೆ.
• ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಹಿಂಪಡೆಯುವುದು ಮತ್ತೊಂದು ಕಾರಣ.
• ಜೊತೆಗೆ, ಜಾಗತಿಕ ಮಟ್ಟದ ಆರ್ಥಿಕ ಅನಿಶ್ಚಿತತೆ ಕೂಡ ಕರೆನ್ಸಿ ಮಾರುಕಟ್ಟೆಗೆ ಭಾರಿ ಪರಿಣಾಮ ಬೀರಿದೆ.
2026ರಲ್ಲಿ ರೂಪಾಯಿಯ ಸ್ಥಿತಿ ಹೇಗಿರಬಹುದು?
RBI ಅಂದಾಜು ಪ್ರಕಾರ, ಭಾರತೀಯ ರೂಪಾಯಿಯ ಮೇಲಿನ ಒತ್ತಡ ಮುಂದುವರಿಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ 2026ರಲ್ಲಿ ರೂಪಾಯಿಯ ಮೌಲ್ಯ ಅಸ್ಥಿರವಾಗಿರುವ ಸೂಚನೆಗಳಿವೆ. ಪ್ರಸ್ತುತ ಮಾರುಕಟ್ಟೆ ಸ್ಥಿತಿಯನ್ನು ನೋಡಿದರೆ, ರೂಪಾಯಿ ‘ಕರಡಿಯ ಹಿಡಿತ’ದಲ್ಲಿರುವಂತಿದೆ.
ಆದರೆ ನಿರೀಕ್ಷೆಗೆ ಅವಕಾಶವೂ ಇದೆ…
ಈ ತಾತ್ಕಾಲಿಕ ಕುಸಿತದ ನಡುವೆಯೂ ಭಾರತೀಯ ಆರ್ಥಿಕತೆ ಬಲಿಷ್ಠವಾಗಿಯೇ ಮುಂದುವರಿದಿದೆ. ದೇಶದ ಆಂತರಿಕ ಉತ್ಪಾದನೆ ಉತ್ತಮವಾಗಿದೆ. ದರ ಏರಿಕೆಯೂ ನಿಯಂತ್ರಣದಲ್ಲಿದೆ.
ಅದರ ಫಲವಾಗಿ, ಭಾರತದ ಆರ್ಥಿಕ ಬೆಳವಣಿಗೆ ಮುಂದಿನ ದಿನಗಳಲ್ಲೂ ಸ್ಥಿರವಾಗಿ ಹಾಗೂ ಶಕ್ತಿಯಾಗಿ ಸಾಗುವ ಭರವಸೆ ಇದೆ.














