ರೋಮ್: ಕ್ರಿಸ್ಮಸ್ ದಿನದಂದು ಯುದ್ಧ ವಿರಾಮ ಘೋಷಿಸಬೇಕೆಂಬ ತಮ್ಮ ಮನವಿಯನ್ನು ರಷ್ಯಾ ತಿರಸ್ಕರಿಸಿರುವುದರಿಂದ ತೀವ್ರ ನೋವುಂಟಾಗಿದೆ ಎಂದು ಪೋಪ್ ಲಿಯೋ (Pope Leo XIV) ತಿಳಿಸಿದ್ದಾರೆ.
ಪೂರ್ವ ಯುರೋಪಿನ ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವು 2022ರ ಫೆಬ್ರವರಿಯಿಂದ ನಿರಂತರವಾಗಿ ನಡೆಯುತ್ತಿದೆ. ಈ ಸಂಘರ್ಷಕ್ಕೆ ಅಂತ್ಯ ಕಲ್ಪಿಸುವ ನಿಟ್ಟಿನಲ್ಲಿ ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಶಾಂತಿ ಪ್ರಯತ್ನಗಳಲ್ಲಿ ತೊಡಗಿವೆ. ಆದರೆ ಅಂತಾರಾಷ್ಟ್ರೀಯ ಸಮುದಾಯದ ತೀವ್ರ ವಿರೋಧದ ನಡುವೆಯೂ ರಷ್ಯಾ ಉಕ್ರೇನ್ ಮೇಲೆ ದಾಳಿ ಮುಂದುವರಿಸಿದೆ.
ಇದರ ನಡುವೆ, ಡಿಸೆಂಬರ್ 25ರಂದು ಜಗತ್ತಿನಾದ್ಯಂತ ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಕನಿಷ್ಠ ಒಂದು ದಿನವಾದರೂ ಯುದ್ಧವನ್ನು ಸ್ಥಗಿತಗೊಳಿಸಿ ವಿಶ್ವ ಶಾಂತಿಗೆ ಆದ್ಯತೆ ನೀಡಬೇಕೆಂದು ಪೋಪ್ ಲಿಯೋ XIV ಮನವಿ ಮಾಡಿದ್ದರು. ಆದರೆ ಈ ಶಾಂತಿ ಕೋರಿಕೆಯನ್ನು ರಷ್ಯಾ ನಿರಾಕರಿಸಿದೆ.
ಈ ಬೆಳವಣಿಗೆಯಿಂದ ಮನನೊಂದು, ರೋಮ್ ಸಮೀಪದ ಕ್ಯಾಸ್ಟೆಲ್ ಗ್ಯಾಂಡೋಲ್ಫೊ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಲಿಯೋ XIV, “ಕ್ರಿಸ್ಮಸ್ ದಿನದ ಯುದ್ಧ ವಿರಾಮದ ನನ್ನ ಮನವಿಯನ್ನು ರಷ್ಯಾ ತಿರಸ್ಕರಿಸಿರುವುದು ನನಗೆ ಅಪಾರ ಬೇದನೆಯನ್ನುಂಟುಮಾಡಿದೆ” ಎಂದು ಹೇಳಿದರು.
“ನಮ್ಮ ದೇವರ ಜನ್ಮದಿನದಂದು ಕನಿಷ್ಠ ಒಂದೇ ದಿನವಾದರೂ ಶಾಂತಿಯನ್ನು ಪಾಲಿಸಬೇಕೆಂದು ಸದುದ್ದೇಶ ಹೊಂದಿರುವ ಎಲ್ಲರಿಗೂ ಮತ್ತೊಮ್ಮೆ ವಿನಂತಿಸುತ್ತೇನೆ. ಈ ಮನವಿಗೆ ಸ್ಪಂದನೆ ದೊರೆಯಲಿದೆ ಎಂಬ ವಿಶ್ವಾಸ ನನಗಿದೆ. ಜಗತ್ತಿನಾದ್ಯಂತ 24 ಗಂಟೆಗಳ ಕಾಲವಾದರೂ ಶಾಂತಿ ನೆಲೆಸಲಿದೆ ಎಂಬ ನಂಬಿಕೆ ನನ್ನದು” ಎಂದು ಅವರು ಹೇಳಿದರು.
ಈ ತಿಂಗಳ ಆರಂಭದಲ್ಲಿ ಪೋಪ್ ಲಿಯೋ XIV ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelenskyy) ಯನ್ನು ಭೇಟಿಯಾಗಿದ್ದರು. ಆ ವೇಳೆ ಉಕ್ರೇನ್‌ಗೆ ಭೇಟಿ ನೀಡುವಂತೆ ಅಧ್ಯಕ್ಷರು ಆಹ್ವಾನಿಸಿದ್ದರೂ, “ಅದು ಯಾವಾಗ ಸಾಧ್ಯವಾಗಲಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ಪೋಪ್ ಉತ್ತರಿಸಿದ್ದರು.














