ತಿರುವನಂತಪುರಂ: ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದ್ದು, ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ಬಿಜೆಪಿ ಮೈತ್ರಿಕೂಟ ತನ್ನ ವಶಕ್ಕೆ ಪಡೆದುಕೊಂಡಿದೆ.
ಮುಂದಿನ ವರ್ಷ ಕೇರಳ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಇತ್ತೀಚೆಗೆ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಒಟ್ಟು 1,199 ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳನ್ನು ಇಂದು ಬೆಳಿಗ್ಗೆ 8 ಗಂಟೆಯಿಂದ ಎಣಿಸಲಾಗುತ್ತಿದೆ. ಈ ಚುನಾವಣೆಯಲ್ಲಿ ಆಡಳಿತಾರೂಢ ‘ಎಡ ಪ್ರಜಾಸತ್ತಾತ್ಮಕ ಒಕ್ಕೂಟ’ಕ್ಕಿಂತ, ಕಾಂಗ್ರೆಸ್ ನೇತೃತ್ವದ ‘ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ ಒಕ್ಕೂಟವು ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.
ಒಟ್ಟು 6 ಪುರಸಭೆಗಳ ಪೈಕಿ ಕಣ್ಣೂರು, ಎರ್ನಾಕುಲಂ, ಕೊಲ್ಲಂ ಮತ್ತು ತ್ರಿಶೂರ್ ನಲ್ಲಿ ಕಾಂಗ್ರೆಸ್ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಕೋಳಿಕೋಡ್ ಮಹಾನಗರ ಪಾಲಿಕೆಯಲ್ಲಿ ಆಡಳಿತಾರೂಢ ಎಡಪಕ್ಷಗಳ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಅದೇ ರೀತಿ, ತಿರುವನಂತಪುರಂ ಮೇಯರ್ ಹುದ್ದೆ ಬಿಜೆಪಿ ಪಾಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಒಟ್ಟು 101 ವಾರ್ಡ್ಗಳಲ್ಲಿ ಬಿಜೆಪಿ ಮೈತ್ರಿಕೂಟ 55 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಒಟ್ಟು 941 ಗ್ರಾಮ ಪಂಚಾಯಿತಿಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 439 ಸ್ಥಾನಗಳಲ್ಲಿ, ಎಡಪಕ್ಷಗಳ ಮೈತ್ರಿಕೂಟ 373 ಸ್ಥಾನಗಳಲ್ಲಿ ಮತ್ತು ಎನ್ ಡಿಎ ಮೈತ್ರಿಕೂಟ 23 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಒಟ್ಟು 152 ಬ್ಲಾಕ್ ಪಂಚಾಯತ್ಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 81 ಸ್ಥಾನಗಳಲ್ಲಿ ಮತ್ತು ಎಡಪಕ್ಷ ಮೈತ್ರಿಕೂಟ 63 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
14 ಜಿಲ್ಲಾ ಪಂಚಾಯತ್ಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 8 ಸ್ಥಾನಗಳಲ್ಲಿ ಮತ್ತು ಎಡಪಕ್ಷ ಮೈತ್ರಿಕೂಟ 6 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
87 ಪುರಸಭೆಗಳ ಪೈಕಿ ಕಾಂಗ್ರೆಸ್ ಮೈತ್ರಿಕೂಟ 55 ಸ್ಥಾನಗಳಲ್ಲಿ, ಎಡಪಕ್ಷಗಳ ಮೈತ್ರಿಕೂಟ 28 ಸ್ಥಾನಗಳಲ್ಲಿ ಮತ್ತು ಎನ್ ಡಿಎ ಮೈತ್ರಿಕೂಟ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.
ಈ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶಗಳನ್ನು ಮುಂದಿನ ವರ್ಷದ ವಿಧಾನಸಭಾ ಚುನಾವಣೆಯ ಮುನ್ನೋಟವೆಂದು ಪರಿಗಣಿಸಲಾಗುತ್ತಿದೆ.














