ಚುನಾವಣೆಯಲ್ಲಿ ಗೆಲ್ಲಲು ಜನರ ವಿಶ್ವಾಸ ಗಳಿಸಬೇಕೇ ಹೊರತು, ಮತದಾರರ ಪಟ್ಟಿಯನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಅನುಮಾನಗಳಿಗೆ ಅವಕಾಶ ನೀಡಬಾರದು.
ಕೇಂದ್ರದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ದೇಶಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ಪ್ರಕ್ರಿಯೆಯಲ್ಲಿ ಕೋಟ್ಯಂತರ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದು ಹಾಕಿರುವುದಾಗಿ ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಅರ್ಹ ಮತದಾರರ ಹೆಸರುಗಳು ಕೈಬಿಡಲ್ಪಟ್ಟರೆ ಅವರ ಪ್ರಜಾಪ್ರಭುತ್ವದ ಹಕ್ಕಿಗೆ ಆಗುವ ನಷ್ಟವನ್ನು ಯಾರು ಸರಿಪಡಿಸುತ್ತಾರೆ?
ಇದರ ನಡುವೆ ಉತ್ತರ ಪ್ರದೇಶದಲ್ಲಿ ಬಿಜೆಪಿ ‘ಮತದಾತ ಜೋಡೋ ಅಭಿಯಾನ’ ಆರಂಭಿಸಲು ಮುಂದಾಗಿದೆ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದಾಗಿ ಹೇಳುತ್ತಿದೆ.
ಹಾಗಾದರೆ ನಮ್ಮ ಪ್ರಶ್ನೆ ಇಷ್ಟೇ: ಒಂದು ಕಡೆ SIR ಪ್ರಕ್ರಿಯೆಯಿಂದ ಮತದಾರರ ಹೆಸರುಗಳು ಕೈಬಿಡಲ್ಪಡುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವಾಗ, ಮತ್ತೊಂದೆಡೆ ಮತದಾರರನ್ನು ಮತ್ತೆ ಹುಡುಕಿ ಸೇರಿಸುವ ಅಭಿಯಾನ ನಡೆಸುವ ಅಗತ್ಯ ಏಕೆ ಎದುರಾಗಿದೆ? ಇದು ನಿಜವಾಗಿಯೂ ಮತದಾರರ ಹಕ್ಕು ರಕ್ಷಿಸುವ ಪ್ರಯತ್ನವೇ ಅಥವಾ ರಾಜಕೀಯ ನಷ್ಟವನ್ನು ಸರಿಪಡಿಸಿಕೊಳ್ಳುವ ತಂತ್ರವೇ?
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಚುನಾವಣಾ ಆಯೋಗದ ಜವಾಬ್ದಾರಿ. ಆದರೆ ಅರ್ಹ ಮತದಾರರೊಬ್ಬರ ಹೆಸರೂ ಅನ್ಯಾಯವಾಗಿ ಅಳಿಸಿಹೋಗಬಾರದು. ಚುನಾವಣಾ ಆಯೋಗವು ಯಾವುದೇ ರಾಜಕೀಯ ಪಕ್ಷದ ಪ್ರಭಾವದಿಂದ ಮುಕ್ತವಾಗಿ, ಸ್ವತಂತ್ರವಾಗಿ ಮತ್ತು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು.
ಮತದಾರರ ಹೆಸರುಗಳನ್ನು ಸೇರಿಸುವುದು, ಅಳಿಸುವುದು ರಾಜಕೀಯ ಪಕ್ಷಗಳ ಇಚ್ಛೆಯಂತೆ ನಡೆಯಬಾರದು. ಅದು ಕಾನೂನು ಮತ್ತು ನ್ಯಾಯಸಮ್ಮತ ಪ್ರಕ್ರಿಯೆಯಂತೆ ನಡೆಯಬೇಕು.
ನಮ್ಮ ಪ್ರಶ್ನೆ: ಮೊದಲು ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂಬ ಆರೋಪಗಳಿಗೆ ಉತ್ತರ ನೀಡಿ. ನಂತರ ಮತದಾರರನ್ನು ಜೋಡಿಸುವ ಅಭಿಯಾನ ನಡೆಸಿ. ಮತದಾರರ ಹಕ್ಕುಗಳ ರಕ್ಷಣೆಯೇ ಉದ್ದೇಶವಾಗಿದ್ದರೆ, ಅರ್ಹ ಮತದಾರರೊಬ್ಬರೂ ಪಟ್ಟಿಯಿಂದ ಹೊರಗುಳಿಯದಂತೆ ಖಾತರಿ ನೀಡಲು ಸಾಧ್ಯವಿಲ್ಲವೇ?














