ಪಾಕಿಸ್ತಾನದಲ್ಲಿರುವ ಹಿಂದೂ ಸಮುದಾಯವು ದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ.
ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇರಿದಂತೆ ವಿಶ್ವದಾದ್ಯಂತ ನೆಲೆಸಿರುವ ಹಿಂದೂ ಸಮುದಾಯಕ್ಕೆ ಶುಭಾಶಯ ಕೋರಿರುವ ಅವರು, ಧಾರ್ಮಿಕ ಸಹಿಷ್ಣುತೆ, ಪರಸ್ಪರ ಗೌರವ ಮತ್ತು ಶಾಂತಿಯುತ ಸಹಬಾಳ್ವೆಯ ಮಹತ್ವವನ್ನು ಪ್ರತಿಪಾದಿಸಿದ್ದಾರೆ.
ಪಾಕಿಸ್ತಾನ ಪ್ರಧಾನಿ ಕಚೇರಿ (PMO) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಸಂದೇಶದಲ್ಲಿ, ದೀಪಾವಳಿಯ ಶುಭ ಸಂದರ್ಭದಲ್ಲಿ ಹಿಂದೂ ಸಮುದಾಯಕ್ಕೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ.
ದೀಪಾವಳಿಯು ದ್ವೇಷ ಮತ್ತು ಹತಾಶೆಯ ಮೇಲೆ ಬೆಳಕಿನ ವಿಜಯವನ್ನು ಸಾರುವ ಹಬ್ಬವಾಗಿದೆ. ಇದರ ಸಂದೇಶವು ಧಾರ್ಮಿಕ ಆಚರಣೆಗಳ ಮಿತಿಯನ್ನು ಮೀರಿ, ಎಲ್ಲರೂ ಶಾಂತಿ ಮತ್ತು ಸಾಮರಸ್ಯದಿಂದ ಬದುಕುವಂತೆ ಪ್ರೇರೇಪಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವು ತನ್ನ ಸಾಂಸ್ಕೃತಿಕ ಮತ್ತು ಧಾರ್ಮಿಕ ವೈವಿಧ್ಯತೆಯ ಬಗ್ಗೆ ಹೆಮ್ಮೆ ಹೊಂದಿದ್ದು, ವಿವಿಧ ಧರ್ಮಗಳು ಮತ್ತು ಸಂಪ್ರದಾಯಗಳು ದೇಶದ ಸಾಮಾಜಿಕ ಪರಂಪರೆಯ ಪ್ರಮುಖ ಭಾಗಗಳಾಗಿವೆ ಎಂದು ಷರೀಫ್ ತಿಳಿಸಿದ್ದಾರೆ.
ದೇಶದ ಅಭಿವೃದ್ಧಿಗೆ ಹಿಂದೂ ಸಮುದಾಯ ನೀಡಿರುವ ಕೊಡುಗೆಗಳನ್ನು ಶ್ಲಾಘಿಸಿರುವ ಅವರು, ಧರ್ಮ, ನಂಬಿಕೆ, ಬಣ್ಣ ಅಥವಾ ಜನಾಂಗದ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ವಿಭಿನ್ನ ಧರ್ಮ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಜನರು ಘನತೆ ಹಾಗೂ ಪರಸ್ಪರ ಗೌರವದಿಂದ ಬದುಕುವ ಶಾಂತಿಯುತ, ಸಮಗ್ರ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣವೇ ಪಾಕಿಸ್ತಾನದ ಸಾಮೂಹಿಕ ಸಂಕಲ್ಪವಾಗಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೀಪಾವಳಿ ಸಂದೇಶದಲ್ಲಿ ಪ್ರತಿಪಾದಿಸಿದ್ದಾರೆ.














