ಖಾಸಿಂ ಸಾಬ್. ಎ
ಇತ್ತೀಚಿಗೆ ದೆಹಲಿಯಲ್ಲಿ (8 ಜೂನ್, 2026) ನಡೆದ INDIA ಒಕ್ಕೂಟದ ಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಡಿದ ಭಾಷಣವು ಕೇವಲ ಸ್ವಾಗತ ಭಾಷಣವಾಗಿರಲಿಲ್ಲ. ಅದು ಭಾರತದ ಇಂದಿನ ರಾಜಕೀಯ ಪರಿಸ್ಥಿತಿಯ ಕುರಿತು ಅವರ ದೃಷ್ಟಿಕೋನದ ನಿರೂಪಣೆಯಾಗಿತ್ತು.
ಬಿಜೆಪಿ-ಆರ್ಎಸ್ಎಸ್ ವಿರುದ್ಧದ ಹೋರಾಟ, ಪ್ರಜಾಪ್ರಭುತ್ವದ ರಕ್ಷಣೆ, ಪ್ರತಿರೋಧದ ರಾಜಕೀಯ ಮತ್ತು ವಿರೋಧ ಪಕ್ಷಗಳ ಒಗ್ಗಟ್ಟಿನ ಅಗತ್ಯದ ಕುರಿತು ಅವರು ಸುದೀರ್ಘವಾಗಿ ಮಾತನಾಡಿದರು. ಭಾಷಣದ ಕೇಂದ್ರಬಿಂದುವಿನಲ್ಲಿ ಒಂದು ಮಾತು ನಿರಂತರವಾಗಿ ಕೇಳಿಬಂದದ್ದು “ಪ್ರತಿರೋಧ”.
ರಾಹುಲ್ ಗಾಂಧಿಯವರ ಪ್ರಕಾರ, ಭಾರತದ ಪ್ರಜಾಪ್ರಭುತ್ವ ಸಂಸ್ಥೆಗಳು ಒತ್ತಡಕ್ಕೆ ಒಳಗಾಗಿವೆ. ಚುನಾವಣಾ ವ್ಯವಸ್ಥೆ, ಮಾಧ್ಯಮ, ಸಾಮಾಜಿಕ ಮಾಧ್ಯಮ ಹಾಗೂ ಆಡಳಿತ ವ್ಯವಸ್ಥೆಗಳು ಆಡಳಿತ ಪಕ್ಷದ ಪ್ರಭಾವಕ್ಕೆ ಒಳಪಟ್ಟಿವೆ. ವರ್ತಮಾನದ ಇಂತಹ ಸಂದಿಗ್ದ ಸಂದರ್ಭದಲ್ಲಿ ಸಾಂಪ್ರದಾಯಿಕ ಚುನಾವಣಾ ರಾಜಕಾರಣಕ್ಕಿಂತಲೂ ಜನರ ಪ್ರತಿರೋಧವೇ ಪ್ರಜಾಪ್ರಭುತ್ವವನ್ನು ಉಳಿಸಬಲ್ಲದು ಎಂಬುದು ಅವರ ವಾದವಾಗಿತ್ತು. ಈ ಸಂದೇಶ ವಿರೋಧ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವಂತದ್ದಾಗಿರಬಹುದು. ಆದರೆ ಇದೇ ಭಾಷಣ ಮತ್ತು ಇದೇ ಸಭೆ ಮತ್ತೊಂದು ಗಂಭೀರ ಪ್ರಶ್ನೆಯನ್ನು ಎತ್ತಿದೆ. ಅದು ಬಿಜೆಪಿ ವಿರುದ್ಧದ ಹೋರಾಟದ ಪ್ರಶ್ನೆಯಲ್ಲ, ಪ್ರಾತಿನಿಧ್ಯದ ಪ್ರಶ್ನೆ.
ಇಲ್ಲಿ ಒಗ್ಗಟ್ಟಿನ ಭಾಷಣದ ನಡುವೆ ಕಾಣದ ಮುಖಗಳನ್ನೂ ಗಮನಿಸಬಹುದು. ಸಭೆಯ ವೇದಿಕೆಯಲ್ಲಿ ಅನೇಕ ಪ್ರಮುಖ ನಾಯಕರು ಉಪಸ್ಥಿತರಿದ್ದರು. ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳ ನಾಯಕರು, ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಷ್ಟ್ರೀಯ ರಾಜಕೀಯದ ಪ್ರಭಾವಿ ವ್ಯಕ್ತಿಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಈ ಚಿತ್ರವನ್ನು ಗಮನದಿಂದ ನೋಡಿದ ಅನೇಕರ ಮನದಲ್ಲಿ ಒಂದು ಪ್ರಶ್ನೆ ಮೂಡಿತು. ಅದು ಏನೆಂದರೆ, ಭಾರತದ ದಲಿತರು, ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರ ಸ್ವತಂತ್ರ ರಾಜಕೀಯ ನಾಯಕತ್ವದ ಉಪಸ್ಥಿತಿ ಅಲ್ಲಿ ಕಾಣಿಸಲಿಲ್ಲ. ಭಾರತದ ಜನಸಂಖ್ಯೆಯ ದೊಡ್ಡ ಭಾಗವನ್ನು ಪ್ರತಿನಿಧಿಸುವ ಈ ಸಮುದಾಯಗಳ ರಾಜಕೀಯ ಧ್ವನಿ ಆ ಸಭೆಯಲ್ಲಿ ಸ್ಪಷ್ಟವಾಗಿ ಪ್ರತಿಫಲಿಸಲಿಲ್ಲ.
ಇದು ಕೇವಲ ವ್ಯಕ್ತಿಗಳ ಗೈರುಹಾಜರಿಯ ಪ್ರಶ್ನೆಯಲ್ಲ, ಬದಲಾಗಿ ರಾಜಕೀಯ ತತ್ವದ ಪ್ರಶ್ನೆಯಾಗಿದೆ. ಜಾತ್ಯತೀತತೆ ಎಂದರೆ ಕೇವಲ ಮತಗಳ ಒಕ್ಕೂಟವಲ್ಲ. INDIA ಮೈತ್ರಿಕೂಟವು ತನ್ನನ್ನು ಜಾತ್ಯತೀತ, ಸಂಸದೀಯ ಪ್ರಜಾಪ್ರಭುತ್ವವಾದಿ ಮತ್ತು ಸಂವಿಧಾನಪರ ಮೈತ್ರಿಕೂಟ ಎಂದು ಪ್ರಸ್ತುತಪಡಿಸುತ್ತದೆ. ಆದರೆ, ಜಾತ್ಯತೀತತೆ ಎಂದರೆ ಕೇವಲ ಧರ್ಮಗಳ ನಡುವೆ ಸಮಾನತೆ ಬಗ್ಗೆ ಮಾತನಾಡುವುದೇ ಅಥವಾ ರಾಜಕೀಯ ಅಧಿಕಾರ ಮತ್ತು ನಾಯಕತ್ವದಲ್ಲಿಯೂ ಸಮಾನ ಪಾಲುದಾರಿಕೆಯನ್ನು ಖಚಿತಪಡಿಸುವುದೇ? ಈ ಪ್ರಶ್ನೆಯೇ ಇಂದು ಪ್ರಮುಖವಾಗಿದೆ.
ಒಂದು ಸಮುದಾಯದ ಜನರು ಚುನಾವಣೆಯಲ್ಲಿ ಮತದಾರರಾಗಿರುವುದು ಮತ್ತು ಅದೇ ಸಮುದಾಯದ ನಾಯಕರು ನಿರ್ಧಾರ ತೆಗೆದುಕೊಳ್ಳುವ ವೇದಿಕೆಯಲ್ಲಿ ಸ್ಥಾನ ಪಡೆಯುವುದು ಇವೆರಡೂ ವಿಭಿನ್ನ ವಿಷಯಗಳು. ಪ್ರಜಾಪ್ರಭುತ್ವದಲ್ಲಿ ನಿಜವಾದ ಒಳಗೊಳ್ಳುವಿಕೆ ಎಂದರೆ ಕೇವಲ ಮತಗಳನ್ನು ಪಡೆಯುವುದಲ್ಲ, ನಾಯಕತ್ವವನ್ನು ಹಂಚಿಕೊಳ್ಳುವುದೂ ಸಹ ಆಗಿರುತ್ತದೆ. ಭಾರತೀಯ ರಾಜಕೀಯದಲ್ಲಿ ಒಂದು ವಿಚಿತ್ರ ಪ್ರವೃತ್ತಿಯು ಹಲವು ದಶಕಗಳಿಂದ ಕಾಣಿಸುತ್ತಿದೆ. ಮುಸ್ಲಿಮರ ಹಕ್ಕುಗಳ ಬಗ್ಗೆ ಮಾತನಾಡುವುದು ಸ್ವೀಕಾರಾರ್ಹ. ಮುಸ್ಲಿಮರ ಸುರಕ್ಷತೆಯ ಬಗ್ಗೆ ಮಾತನಾಡುವುದು ಸ್ವೀಕಾರಾರ್ಹ. ಮುಸ್ಲಿಮರ ಮತಗಳನ್ನು ಕೇಳುವುದು ಸಹಜ. ಆದರೆ ಮುಸ್ಲಿಮರು ತಮ್ಮದೇ ರಾಜಕೀಯ ನಾಯಕತ್ವವನ್ನು ಕಟ್ಟಿಕೊಳ್ಳಲು ಪ್ರಯತ್ನಿಸಿದಾಗ ಇಂತಹ ಅನೇಕ ಪಕ್ಷಗಳು ಅಸೌಕರ್ಯವನ್ನು ಅನುಭವಿಸುತ್ತಿವೆ. ಈ ಟೀಕೆಗೆ ವಾಸ್ತವಿಕ ಆಧಾರವಿದೆಯೇ ಎಂಬುದು ಚರ್ಚೆಯ ಗ್ರಾಸದ ವಿಷಯವಾಗಬಹುದು. ಆದರೆ ಇಂತಹ ಭಾವನೆ ಸಮಾಜದ ಒಂದು ಭಾಗದಲ್ಲಿ ಬೆಳೆಯುತ್ತಿರುವುದು ನಿರಾಕರಿಸಲಾಗದ ಸಂಗತಿ.
ಮುಸ್ಲಿಂ ಸಮುದಾಯದ ರಾಜಕೀಯ ಪ್ರತಿನಿಧಿತ್ವವನ್ನು ತಮ್ಮದೇ ನಾಯಕತ್ವದ ಮೂಲಕ ವ್ಯಕ್ತಪಡಿಸಲು ಬಯಸುವ ಪಕ್ಷಗಳು ಮತ್ತು ಸಂಘಟನೆಗಳು INDIA ಒಕ್ಕೂಟದ ಹೊರಗೆ ಉಳಿದಿವೆ. ಇದಕ್ಕೆ ಚುನಾವಣಾ ಲೆಕ್ಕಾಚಾರದ ಕಾರಣಗಳಿರಬಹುದು. ಇದಕ್ಕೆ ತಾತ್ವಿಕ ಭಿನ್ನಾಭಿಪ್ರಾಯಗಳಿರಬಹುದು. ಆದರೆ ಇದರ ಪರಿಣಾಮವೇನು ಎಂಬುದರ ಕುರಿತು ಸಹ ಚಿಂತಿಸಬೇಕಿದೆ. ಬಹುತೇಕ ಮುಸ್ಲಿಮರು ತಮ್ಮ ರಾಜಕೀಯ ಧ್ವನಿಗೆ ಸಮರ್ಪಕ ಸ್ಥಾನಸಿಗುತ್ತಿಲ್ಲ ಎಂಬ ಭಾವನೆ ಹೊಂದಿದ್ದಾರೆ ಇದು ನಿಜವು ಕೂಡ.
ಈ ಚರ್ಚೆ ಕೇವಲ ಮುಸ್ಲಿಮರ ಬಗ್ಗೆ ಮಾತ್ರವಲ್ಲ. ಭಾರತದ ಪ್ರಜಾಪ್ರಭುತ್ವದಲ್ಲಿ ದಲಿತ ಚಳವಳಿಗಳು ಮತ್ತು ದಲಿತ ರಾಜಕಾರಣವು ಐತಿಹಾಸಿಕ ಪಾತ್ರವಹಿಸಿವೆ. ಬಿ.ಅರ್.ಅಂಬೇಡ್ಕರ್ ಅವರ ಚಿಂತನಾ ಜಗತ್ತಿನ ಪರಂಪರೆಯು ಭಾರತೀಯ ಸಾಮಾಜಿಕ ನ್ಯಾಯದ ರಾಜಕೀಯಕ್ಕೆ ದಿಕ್ಕು ದೆಸೆ ನೀಡಿದೆ. ಆದರೆ ಇಂದು ರಾಷ್ಟ್ರೀಯ ಮಟ್ಟದ ವಿರೋಧ ಪಕ್ಷಗಳ ಒಕ್ಕೂಟದಲ್ಲಿ ದಲಿತ ನಾಯಕತ್ವದ ಸ್ವತಂತ್ರ ಧ್ವನಿ ಎಷ್ಟು ಪ್ರಭಾವಶಾಲಿಯಾಗಿದೆ ಎಂಬ ಪ್ರಶ್ನೆಯೂ ಕೇಳಬೇಕಿದೆ. ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವುದು ಒಂದು ಹಂತ, ಸಾಮಾಜಿಕ ನ್ಯಾಯದ ನಾಯಕತ್ವವನ್ನು ಹಂಚಿಕೊಳ್ಳುವುದು ಮತ್ತೊಂದು ಹಂತ.

ಪ್ರಜಾಪ್ರಭುತ್ವದ ಗುಣಮಟ್ಟವನ್ನು ಅಳೆಯಬೇಕಾದರೆ ಎರಡನೆಯ ಹಂತವೇ ಹೆಚ್ಚು ಪ್ರಾಭಾವಿ ಹಾಗೂ ಪರಿಣಾಮಕಾರಿಯಾಗಿರುತ್ತದೆ. ಈ ನಿಟ್ಟಿನಲ್ಲಿಯೆ ರಾಹುಲ್ ಗಾಂಧಿಯವರ ಈ ಸಂದರ್ಭದ ಭಾಷಣದ ಬಲ ಮತ್ತು ಮಿತಿಗಳನ್ನು ಸಹ ಅಳೆಯ ಬೇಕಿದೆ. ರಾಹುಲ್ ಗಾಂಧಿಯವರ ಭಾಷಣದ ಬಲವೇನೆಂದರೆ, ಅವರು ರಾಜಕೀಯವನ್ನು ಕೇವಲ ಚುನಾವಣೆಯ ಗೆಲುವು-ಸೋಲಿನ ಚೌಕಟ್ಟಿನಲ್ಲಿ ನೋಡಲಿಲ್ಲ. ಅವರು ಅದನ್ನು ನಿರಂತರ ನೈತಿಕ ಮತ್ತು ಸೈದ್ಧಾಂತಿಕ ಹೋರಾಟವಾಗಿ ಚಿತ್ರಿಸಿದರು. ಸತ್ಯ, ಅಹಿಂಸೆ, ಸಹಾನುಭೂತಿ ಮತ್ತು ಪ್ರತಿರೋಧ ಎಂಬ ಮೌಲ್ಯಗಳನ್ನು ಒತ್ತಿ ಹೇಳಿದರು. ಆದರೆ ಈ ಭಾಷಣದ ಮಿತಿಯೂ ಅಷ್ಟೇ ಸ್ಪಷ್ಟವಾಗಿದೆ. ಪ್ರಜಾಪ್ರಭುತ್ವವನ್ನು ರಕ್ಷಿಸುವ ಹೋರಾಟದ ಕುರಿತು ಮಾತನಾಡಿದರೂ, ಪ್ರಾತಿನಿಧ್ಯದ ಅಸಮಾನತೆ ಕುರಿತು ಯಾವುದೇ ಆತ್ಮಾವಲೋಕನ ಕಾಣಿಸಲಿಲ್ಲ. ಸಂವಿಧಾನದ ರಕ್ಷಣೆಯ ಬಗ್ಗೆ ಮಾತನಾಡಿದರೂ, ರಾಜಕೀಯ ಅಧಿಕಾರದ ಹಂಚಿಕೆ ಕುರಿತು ಸ್ಪಷ್ಟ ಬೆಳಕು ಚೆಲ್ಲಲಿಲ್ಲ. ಪ್ರತಿರೋಧದ ಬಗ್ಗೆ ಮಾತನಾಡಿದರೂ, ಪ್ರತಿರೋಧದ ನಾಯಕತ್ವ ಯಾರ ಕೈಯಲ್ಲಿರಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲಿ ಇರಲಿಲ್ಲ.
ಈ ಕಾರ್ಯಕ್ರಮ ಒಂದು ಅದ್ಭುತ ಕ್ಷಣ, ಅಲ್ಲಿ ರಾಹುಲ್ ಗಾಂಧಿ ನೀಡಿದ ಪೀಠಿಕೆ ನುಡಿಯೂ ಸಹ ಸೂಕ್ಷ್ಮ ಹಾಗೂ ಸ್ವಾಗತಾರ್ಹ. ಆದರೆ ಇದರೊಂದಿಗೆ ಎದ್ದಿರುವ ಪ್ರಶ್ನೆಗಳು ಮೈತ್ರಿಕೂಟದ ಬೆನ್ನಿಗಂಟಿರುವ ‘ಜಾತ್ಯತೀತತೆ’ (Secularism) ಎಂಬ ಮುಖವಾಡವನ್ನು ಕಳಚಿಹಾಕುವಂತಿದೆ. ‘ಜಾತ್ಯತೀತ ಪಕ್ಷಗಳು’ ಎಂದು ಕರೆಸಿಕೊಳ್ಳುವ ಈ ಒಕ್ಕೂಟದ ನಾಯಕರು ಹಿಂದುಳಿದ, ದಲಿತ ಹಾಗೂ ಮುಸ್ಲಿಂ ಸಮುದಾಯದ ಹೆಮ್ಮೆಯ ರಾಜಕಾರಣ ಅಥವಾ ಸ್ವತಂತ್ರ ಮುಸ್ಲಿಂ ಪ್ರಾತಿನಿಧ್ಯವನ್ನು ವ್ಯವಸ್ಥಿತವಾಗಿ ಹೇಗೆ ದೂರ ಇಟ್ಟಿದ್ದಾರೆ ಎಂಬುದೂ ಸಹ ಬಹಿರಂಗಗೊಂಡಿತ್ತು.
ಇಂಡಿಯಾ ಒಕ್ಕೂಟವು ತಾನು ಎಲ್ಲರನ್ನೂ ಒಳಗೊಳ್ಳುವ ಮೈತ್ರಿ ಎಂದು ಹೇಳಿಕೊಳ್ಳುತ್ತದೆ. ಆದರೆ, ಮುಸ್ಲಿಂ ಸಮುದಾಯದ ಧ್ವನಿಯಾಗಿ ಗುರುತಿಸಿಕೊಂಡಿರುವ ಪ್ರಮುಖ ಪಕ್ಷಗಳನ್ನು ಈ ಮೈತ್ರಿಯಿಂದ ಸಂಪೂರ್ಣವಾಗಿ ಹೊರಗಿಡಲಾಗಿತ್ತು. ಕೇರಳ ರಾಜ್ಯ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಪಕ್ಷದ ಜೊತೆ ಅಲಯನ್ಸ್ ಬೇಕಿತ್ತು, ತಮಿಳುನಾಡು ರಾಜ್ಯ ಚುನಾವಣೆಯಲ್ಲಿ SDPI ಜೊತೆ ಅಲಯನ್ಸ್ ಬೇಕಿತ್ತು. ಆದರೆ, INDIA ಮೈತ್ರಿಕೂಟದಲ್ಲಿ ಸಹಬಾಗಿತ್ವ ಬೇಡ. ಅಸಾದುದ್ದೀನ್ ಓವೈಸಿ ಅವರ AIMIM ಪಕ್ಷದ ರಾಜಕಾರಣದ ಬಗ್ಗೆ ಮೈತ್ರಿಕೂಟಕ್ಕೆ ಆಕ್ಷೇಪಣೆಗಳಿವೆ ಎಂದು ವಾದಿಸಲಾಗುತ್ತದೆ. ಆದರೆ ಪ್ರಶ್ನೆ ಇರುವುದು ಕೇವಲ ಓವೈಸಿ ಅವರ ಬಗ್ಗೆ ಅಲ್ಲ. ಬದಲಿಗೆ ಇಂಡಿಯನ್ ಸೆಕ್ಯುಲರ್ ಫ್ರಂಟ್ (ISF) ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾಗಳಿಗೆ ಈ ಮೈತ್ರಿಯಲ್ಲಿ ಸ್ಥಾನವಿಲ್ಲ. ಅಸ್ಸಾಂನಲ್ಲಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಪ್ರತಿನಿಧಿಸುವ ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (AIUDF) ಸಹ ಮೈತ್ರಿಯಿಂದ ಹೊರಗಿದೆ. ಉತ್ತರ ಪ್ರದೇಶದ ಪೀಸ್ ಪಾರ್ಟಿ ಮತ್ತು ರಾಷ್ಟ್ರೀಯ ಉಲಮಾ ಕೌನ್ಸಿಲ್ ನಾಯಕರನ್ನು ಕನಿಷ್ಠ ಮಾತುಕತೆಗೂ ಸಹ ಇದುವರೆಗೂ ಪ್ರಯತ್ನಿಸಿಲ್ಲ.
ಈ ಯಾವುದೇ ಪ್ರಮುಖ ಮುಸ್ಲಿಂ ಅಥವಾ ದಲಿತ ನಾಯಕತ್ವದ ಸೆಕ್ಯುಲರ್ ಪಕ್ಷಗಳಿಗೂ ಇಂಡಿಯಾ ಒಕ್ಕೂಟದಲ್ಲಿ ಜಾಗ ಸಿಕ್ಕಿಲ್ಲ. ಅಥವಾ ಕೊಟ್ಟಿಲ್ಲ ಹಾಗೂ ಸೃಷ್ಟಿಸಿಲ್ಲ. ಮತ್ತೊಂದು ಪ್ರಮುಖ ಅಂಶ, ಸದ್ಯ ಕಾಂಗ್ರೆಸ್ ಪಕ್ಷ ಅಥವಾ ಕಾಂಗ್ರೆಸ್ ಅಲೆಯನ್ಸ್ ಇರುವ ಯಾವ ರಾಜ್ಯಗಳಲ್ಲಯೂ ಒಬ್ಬ ದಲಿತ ಅಥವಾ ಮುಸ್ಲಿಂ ಒಂದು ಕಡೆ ಇರಲಿ ಕನಿಷ್ಠ ಒಬ್ಬ ಒಬಿಸಿ ಸಮುದಾಯಗಳ ಮುಖ್ಯ ಮಂತ್ರಿಯೂ ಸಹ ಇಲ್ಲ.
ಈ ನಡೆ ಸ್ಪಷ್ಟವಾದ ಒಂದು ಸಂದೇಶವನ್ನು ನೀಡುತ್ತದೆ. ಜಾತ್ಯತೀತ ಎನ್ನಿಸಿಕೊಳ್ಳುವ ಪಕ್ಷಗಳಿಗೆ ದಲಿತ, ಮುಸ್ಲಿಮರ ಮತಗಳು ಬೇಕು, ಆದರೆ ಈ ಸಮುದಾಯ ತನಗಾಗಿ ಸ್ವತಂತ್ರ ನಾಯಕತ್ವ ಅಥವಾ ಸ್ವಾಭಿಮಾನಿ ರಾಜಕಾರಣವನ್ನು ಬೆಳೆಸಿಕೊಳ್ಳುವುದು ಅವರಿಗೆ ಇಷ್ಟವಿಲ್ಲ. ವಿಶೇಷವಾಗಿ ಮುಸ್ಲಿಂ ಸಮುದಾಯವು ಕೇವಲ ತಮಗೆ ಮತ ಹಾಕುವ ‘ಮತ ಬ್ಯಾಂಕ್’ ಆಗಿ ಉಳಿಯಬೇಕೇ ಹೊರತು, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರದ ಪೀಠದಲ್ಲಿ ಅಥವಾ ವೇದಿಕೆಗಳಲ್ಲಿ ಸಮಾನವಾಗಿ ಕುಳಿತುಕೊಳ್ಳಬಾರದು ಎಂಬ ದ್ವಂದ್ವ ನೀತಿ ಇಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಮುಸ್ಲಿಂ ಸಮುದಾಯದ ನೈಜ ರಾಜಕೀಯ ಪ್ರಾತಿನಿಧ್ಯವನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುವ ಮೂಲಕ, ಇಂಡಿಯಾ ಮೈತ್ರಿಕೂಟವು ಮುಸ್ಲಿಂ ಸಮುದಾಯದ ಸ್ವತಂತ್ರ ಅಸ್ತಿತ್ವ ಮತ್ತು ಸ್ವಾಭಿಮಾನಿ ರಾಜಕಾರಣವನ್ನು ಹೊರಗಿಡುತ್ತಿದೆ ಎಂಬ ಆರೋಪಗಳಿಗೆ ಇದು ಪುಷ್ಟಿ ನೀಡಿದಂತಾಗಿದೆ. ಮತಗಳನ್ನು ಮಾತ್ರ ಪಡೆದು, ಪ್ರಾತಿನಿಧ್ಯ ನೀಡದೆ ವಂಚಿಸುವ ಇಂತಹ ನಡೆ ನಿಜಕ್ಕೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ವೋಟ್ ಬ್ಯಾಂಕ್ ರಾಜಕಾರಣ ವಷ್ಟೇ.
ಇಂತಹ ಸಂದರ್ಭಗಳಲ್ಲಿಯೇ ಈ INDIA ಮೈತ್ರಿಕೂಟವು ನೈಜ ಜಾತ್ಯತೀತವೆ ಎಂಬ ಪ್ರಶ್ನೆ ಮೂಡುತ್ತದೆ. ವಿರೋಧ ಪಕ್ಷಗಳ ವಿರುದ್ಧ ಆಗಾಗ ಕೇಳಿಬರುವ ಆರೋಪವೇನೆಂದರೆ, “ಮುಸ್ಲಿಮರು ಮತ್ತು ದಲಿತರು ಕೇವಲ ಮತದಾರರಾಗಿ ಮಾತ್ರ ಬೇಕು. ಆದರೆ, ಅಧಿಕಾರ ಹಂಚಿಕೊಳ್ಳುವ ಪಾಲುದಾರರಾಗಿ ಬೇಡ.” ಈ ಆರೋಪವನ್ನು ಸಂಪೂರ್ಣ ಸತ್ಯ ಎಂದು ಹೇಳುವುದು ಸರಳೀಕರಣವಾಗಬಹುದು. ಆದರೆ ಈ ಆರೋಪ ಯಾಕೆ ನಿರಂತರವಾಗಿ ಕೇಳಿಬರುತ್ತಿದೆ ಎಂಬುದನ್ನು ಪರಿಶೀಲಿಸುವ ಸಾವಧಾನ ಮತ್ತು ಅಗತ್ಯ ಇಂದು ಹೆಚ್ಚಿದೆ. ಯಾಕೆಂದರೆ ಪ್ರಜಾಪ್ರಭುತ್ವದಲ್ಲಿ ಭಾವನೆಗಳೂ ರಾಜಕೀಯ ವಾಸ್ತವಗಳೇ. ಒಂದು ಸಮುದಾಯವು ತನ್ನನ್ನು ಕೇವಲ ಮತದಾರರಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂದು ಭಾವಿಸಲು ಆರಂಭಿಸಿದರೆ, ಅದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಒಳ್ಳೆಯ ಸೂಚನೆಯಲ್ಲ. ಈ ಕಾರಣಕ್ಕಾಗಿ ಇಂದು ಈ ಒಗ್ಗಟ್ಟಿನ ಕಲ್ಪನೆಗೆ ಹೊಸ ವ್ಯಾಖ್ಯಾನ ಬೇಕಾಗಿದೆ.
ಇಂದು INDIA ಮೈತ್ರಿಕೂಟದ ಮುಂದೆ ಇರಬೇಕಾದ ದೊಡ್ಡ ಸವಾಲು ಬಿಜೆಪಿ ವಿರುದ್ಧದ ಹೋರಾಟವಲ್ಲ. ಅದಕ್ಕಿಂತ ಮೊದಲು ಹಾಗೂ ದೊಡ್ಡ ಸವಾಲು ತನ್ನದೇ ಜಾತ್ಯತೀತತೆಯ ಪರಿಕಲ್ಪನೆಯನ್ನು ವಿಶ್ವಾಸಾರ್ಹಗೊಳಿಸುವುದು. ಒಗ್ಗಟ್ಟು ಎಂದರೆ ಕೇವಲ ದೊಡ್ಡ ಪಕ್ಷಗಳ ನಡುವೆ ಒಪ್ಪಂದವಲ್ಲ. ಒಗ್ಗಟ್ಟು ಎಂದರೆ ವಿಭಿನ್ನ ಸಾಮಾಜಿಕ ಸಮುದಾಯಗಳ ಗೌರವಯುತ ಪಾಲುದಾರಿಕೆ. ಒಗ್ಗಟ್ಟು ಎಂದರೆ ನಿರ್ಧಾರ ತೆಗೆದುಕೊಳ್ಳುವ ಸ್ಥಳದಲ್ಲಿ ಸಮಾನ ಸ್ಥಾನ. ಒಗ್ಗಟ್ಟು ಎಂದರೆ ನಾಯಕತ್ವದ ಹಂಚಿಕೆ. ಕೊನೆಯ ಮಾತು, ರಾಹುಲ್ ಗಾಂಧಿಯವರ ಭಾಷಣವು ಪ್ರತಿರೋಧದ ರಾಜಕೀಯಕ್ಕೆ ಹೊಸ ಶಕ್ತಿ ನೀಡುವ ಪ್ರಯತ್ನವಾಗಿತ್ತು. ಆದರೆ, ಪ್ರತಿರೋಧದ ರಾಜಕೀಯವು ಯಶಸ್ವಿಯಾಗಬೇಕಾದರೆ ಅದು ಕೇವಲ ಬಿಜೆಪಿ ವಿರೋಧದ ಒಗ್ಗಟ್ಟಾಗಿ ಉಳಿಯಬಾರದು. ಅದು ಭಾರತದ ವೈವಿಧ್ಯಮಯ ಸಮುದಾಯಗಳ ಸಮಾನ ಪಾಲುದಾರಿಕೆಯ ಚಳವಳಿಯಾಗಬೇಕು.
ದಲಿತರು, ಹಿಂದುಳಿದವರು, ಆದಿವಾಸಿಗಳು ಮತ್ತು ಮುಸ್ಲಿಮರು ಕೇವಲ ಬೆಂಬಲಿಗರಾಗಿ ಅಲ್ಲ, ನಿರ್ಧಾರ ತೆಗೆದುಕೊಳ್ಳುವ ನಾಯಕರಾಗಿಯೂ ಕಾಣಿಸಿಕೊಳ್ಳಬೇಕು. ಅಲ್ಲಿಯವರೆಗೆ ಈ ಪ್ರಶ್ನೆ ಯೇಳುತ್ತಲೇ ಇರುತ್ತದೆ. “ಮತಗಳು ಬೇಕು, ಆದರೆ ನಾಯಕತ್ವ ಬೇಡವೇ?” ಈ ಪ್ರಶ್ನೆಗೆ ಉತ್ತರ ನೀಡುವುದು ಕೇವಲ INDIA ಮೈತ್ರಿಕೂಟದ ಜವಾಬ್ದಾರಿಯಲ್ಲ. ಭಾರತದ ಪ್ರಜಾಪ್ರಭುತ್ವದ ಭವಿಷ್ಯದ ಕುರಿತು ಚಿಂತಿಸುವ ಪ್ರತಿಯೊಬ್ಬ ರಾಜಕೀಯ ವ್ಯಕ್ತಿಯ ಜವಾಬ್ದಾರಿಯೂ ಆಗಿದೆ.














