ಡಿ.ಸಿ.ಪ್ರಕಾಶ್ ಸಂಪಾದಕರು
ಬೆಂಗಳೂರು: ರಾಜ್ಯದೆಲ್ಲೆಡೆ ಹೆಚ್ಚಾಗಿ ಕಂಡುಬರುವ ‘ಹಾಟ್ ಚಿಪ್ಸ್’ ಹಾಗೂ ಸ್ಥಳೀಯ ತಿಂಡಿಗಳ ಅಂಗಡಿಗಳಲ್ಲಿ ಗಂಭೀರವಾದ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. Potato Chips, Banana Chips, Tapioca Chips, Mixture, Wheel Chips, Triangle Chips, Flower Chips, Potti Chips ಸೇರಿದಂತೆ ವಿವಿಧ ತಿನಿಸುಗಳನ್ನು ಮಾರಾಟ ಮಾಡುತ್ತಿರುವ ಅನೇಕ ಅಂಗಡಿಗಳಲ್ಲಿ FSSAI (Food Safety and Standards Authority of India) ಲೈಸೆನ್ಸ್ ಇಲ್ಲದೇ ವ್ಯಾಪಾರ ನಡೆಯುತ್ತಿದೆ ಎಂಬುದು ಆತಂಕಕಾರಿ ವಿಚಾರವಾಗಿದೆ.
GST ಇದೆ, ಆದರೆ ಆಹಾರ ಸುರಕ್ಷತೆ ಇಲ್ಲ!
ಈ ಅಂಗಡಿಗಳಲ್ಲಿ ಹೆಚ್ಚಿನವು GST ನೋಂದಣಿ ಹೊಂದಿದ್ದರೂ, ಆಹಾರ ಸುರಕ್ಷತೆಗೆ ಸಂಬಂಧಿಸಿದ FSSAI ಲೈಸೆನ್ಸ್, ಉತ್ಪನ್ನಗಳ ಮೇಲೆ ಇರಬೇಕಾದ ಪೌಷ್ಟಿಕಾಂಶ ವಿವರಗಳು (Nutrition Facts), ಪದಾರ್ಥಗಳ ಪಟ್ಟಿ, ತಯಾರಿಸಿದ ದಿನಾಂಕ, ಅವಧಿ ಮುಕ್ತಾಯ ದಿನಾಂಕ, ತಯಾರಕರ ವಿಳಾಸ ಮುಂತಾದವುಗಳೇ ಇಲ್ಲದೆ ಮಾರಾಟ ಮಾಡಲಾಗುತ್ತಿದೆ.
GST ಕೇವಲ ತೆರಿಗೆಗೆ ಸಂಬಂಧಿಸಿದ ನಿಯಮವಾಗಿದ್ದು, ಆಹಾರ ಸುರಕ್ಷತೆಗೆ ಇದಕ್ಕೆ ಯಾವುದೇ ಸಂಬಂಧವಿಲ್ಲ. ಆದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆಹಾರ ಸುರಕ್ಷತಾ ಕಾಯ್ದೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಆಹಾರ ಸುರಕ್ಷತಾ ಕಾಯ್ದೆ-ಸ್ಪಷ್ಟ ಉಲ್ಲಂಘನೆ
Food Safety and Standards Act, 2006 ಪ್ರಕಾರ: ಆಹಾರ ತಯಾರಿಕೆ, ಸಂಗ್ರಹಣೆ ಹಾಗೂ ಮಾರಾಟ ಮಾಡುವ ಪ್ರತಿಯೊಂದು ಅಂಗಡಿಯೂ FSSAI ನೋಂದಣಿ ಅಥವಾ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದೆ. ಅದೇರೀತಿ ಪ್ಯಾಕ್ ಮಾಡಲಾದ ಆಹಾರಗಳ ಮೇಲೆ Nutrition Label ಕೂಡ ಕಡ್ಡಾಯವಾಗಿದೆ. ಗ್ರಾಹಕರಿಗೆ ಸುರಕ್ಷಿತ ಆಹಾರ ಒದಗಿಸುವುದು ವ್ಯಾಪಾರಿಗಳ ಮೂಲ ಜವಾಬ್ದಾರಿ. ಈ ನಿಯಮಗಳನ್ನು ಉಲ್ಲಂಘಿಸಿದರೆ ರೂ.5 ಲಕ್ಷವರೆಗೆ ದಂಡ, ಅಂಗಡಿ ಸೀಲ್ ಮಾಡುವಿಕೆ ಹಾಗೂ ಪುನರಾವರ್ತನೆ ಆದರೆ ಜೈಲು ಶಿಕ್ಷೆಯೂ ವಿಧಿಸಬಹುದು.
ಆರೋಗ್ಯಕ್ಕೆ ಅಪಾಯ
ಬಹುತೇಕ ಹಾಟ್ ಚಿಪ್ಸ್ ಅಂಗಡಿಗಳಲ್ಲಿ: ಒಂದೇ ಎಣ್ಣೆಯನ್ನು ಹಲವು ದಿನ ಬಳಕೆ, ಅತಿಯಾದ ಟ್ರಾನ್ಸ್ ಫ್ಯಾಟ್, ತೆರೆದ ಸ್ಥಳದಲ್ಲಿ ತಿನಿಸು ಮಾರಾಟ ಸ್ವಚ್ಛತೆ, ಕೈಗವಸು, ಕೂದಲು ಮುಚ್ಚುವಿಕೆ ಇಲ್ಲ, ಧೂಳು, ಈಗಳಿಂದ ರಕ್ಷಣೆ ಇಲ್ಲ. ಇವುಗಳಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು, ಕ್ಯಾನ್ಸರ್, ರಕ್ತದೊತ್ತಡ, ಮಧುಮೇಹ ಮುಂತಾದ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.
ಕಾನೂನು ಹೋರಾಟಕ್ಕೆ ಸಿದ್ಧತೆ
ಈ ಗಂಭೀರ ವಿಚಾರದ ಕುರಿತು ಸಾಮಾಜಿಕ ಹೋರಾಟಗಾರರು ಹಾಗೂ ಸಾರ್ವಜನಿಕ ಹಿತಾಸಕ್ತಿಯುಳ್ಳ ವ್ಯಕ್ತಿಗಳು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ‘ರಾಜ್ಯದಲ್ಲಿ ಸಾವಿರಾರು ಹಾಟ್ ಚಿಪ್ಸ್ ಅಂಗಡಿಗಳು ಕಾರ್ಯನಿರ್ವಹಿಸುತ್ತಿದ್ದರೂ, ಎಷ್ಟು ಅಂಗಡಿಗಳಿಗೆ FSSAI ಲೈಸೆನ್ಸ್ ಇದೆ ಎಂಬ ಮಾಹಿತಿ ಇಲ್ಲ? ಎಷ್ಟು ಬಾರಿ ತಪಾಸಣೆ ನಡೆದಿದೆ? ಎಷ್ಟು ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ? ಎಂಬ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂಬ ಆರೋಪ ಕೇಳಿಬರುತ್ತಿದೆ.
FSSAI ಲೈಸೆನ್ಸ್ ಇಲ್ಲದ ಅಂಗಡಿಗಳನ್ನು ತಕ್ಷಣ ಮುಚ್ಚಬೇಕು. Nutrition Label ಕಡ್ಡಾಯಗೊಳಿಸಬೇಕು. ನಿಯಮಿತ ಆರೋಗ್ಯ ಪರಿಶೀಲನೆ ನಡೆಸಬೇಕು. ಗ್ರಾಹಕರ ಆರೋಗ್ಯದೊಂದಿಗೆ ಆಟವಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದು ವ್ಯಾಪಾರಿಗಳ ವಿರುದ್ಧದ ಹೋರಾಟವಲ್ಲ; ಸಾರ್ವಜನಿಕ ಆರೋಗ್ಯ ರಕ್ಷಣೆಯ ಹೋರಾಟ ಎಂಬುದು ಹೋರಾಟಗಾರರ ಸ್ಪಷ್ಟ ನಿಲುವಾಗಿದೆ.
“ಇದು ಸಣ್ಣ ನಿಯಮ ಉಲ್ಲಂಘನೆ ಅಲ್ಲ, ಇದು ಸಾರ್ವಜನಿಕ ಆರೋಗ್ಯದ ಮೇಲೆ ನಡೆಯುತ್ತಿರುವ ದಾಳಿ”














