ಬೆಂಗಳೂರು: ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಹೆಸರನ್ನು VB-G RAM G ಎಂದು ಬದಲಾಯಿಸಿರುವ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್, ಕರ್ನಾಟಕದ 6,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಕಚೇರಿಗಳಿಗೆ ‘ರಾಷ್ಟ್ರಪಿತ ಮಹಾತ್ಮ ಗಾಂಧಿ’ ಎಂಬ ಹೆಸರಿಡುವ ಕುರಿತು ಗಂಭೀರ ಚಿಂತನೆ ನಡೆಸಿದೆ.
ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ಬಜೆಟ್‌ನಲ್ಲಿ ಈ ಸಂಬಂಧ ಘೋಷಣೆ ಮಾಡುವ ಸಾಧ್ಯತೆ ಇದೆ. ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರ ಸಲಹೆಯನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಉಗ್ರಪ್ಪ ಅವರು ಜನವರಿ 20ರಂದು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ನಿರುದ್ಯೋಗ ಸಮಸ್ಯೆ ನಿವಾರಣೆಯ ಉದ್ದೇಶದಿಂದ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಮಹಾತ್ಮ ಗಾಂಧಿ ಹೆಸರಿನಲ್ಲಿ ಮನ್ರೇಗಾ ಕಾಯ್ದೆಯನ್ನು ಜಾರಿಗೆ ತಂದಿತ್ತು ಎಂದು ಉಗ್ರಪ್ಪ ಸ್ಮರಿಸಿದ್ದಾರೆ. ಆದರೆ 2014ರ ಬಳಿಕ ಅಧಿಕಾರಕ್ಕೆ ಬಂದ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ಯೋಜನೆಗೆ ಸಮರ್ಪಕ ಅನುದಾನ ನೀಡದೆ, ಮಹಾತ್ಮ ಗಾಂಧಿ ಹೆಸರನ್ನು ಕೈಬಿಟ್ಟು ಕಾಯ್ದೆಯ ಹೆಸರನ್ನೇ ಬದಲಾಯಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಈ ಕ್ರಮವು ಮಹಾತ್ಮ ಗಾಂಧಿಯವರ ಅವಮಾನವಾಗಿದ್ದು, ಸಂವಿಧಾನದ 51(ಎ) ವಿಧಿಯ ಉಲ್ಲಂಘನೆಯಾಗಿದೆ ಎಂದು ಉಗ್ರಪ್ಪ ಹೇಳಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಗುಪ್ತ ಕಾರ್ಯಸೂಚಿಯ ಭಾಗವಾಗಿದ್ದು, ನಾಥೂರಾಮ್ ಗೋಡ್ಸೆಯ ಸಿದ್ಧಾಂತಗಳಿಗೆ ಉತ್ತೇಜನ ನೀಡುವ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ. ಸಂವಿಧಾನ ಮತ್ತು ಗಾಂಧೀಜಿಯ ಆದರ್ಶಗಳಲ್ಲಿ ನಂಬಿಕೆ ಇಟ್ಟಿರುವ ಕಾಂಗ್ರೆಸ್, ಈ ನಡೆಗೆ ಸೂಕ್ತ ಉತ್ತರ ನೀಡಬೇಕಾಗಿದೆ ಎಂದಿದ್ದಾರೆ.
ಅಧಿಕಾರದ ವಿಕೇಂದ್ರೀಕರಣ ಮತ್ತು ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧಿಯವರ ಮೂಲ ಪರಿಕಲ್ಪನೆಗಳಾಗಿದ್ದು, ಅವುಗಳ ಆಧಾರದಲ್ಲೇ ಗ್ರಾಮ ಪಂಚಾಯತಿಗಳು ಮತ್ತು ಸ್ಥಳೀಯ ಸಂಸ್ಥೆಗಳು ರೂಪುಗೊಂಡಿವೆ. ಈ ಹಿನ್ನೆಲೆಯಲ್ಲಿ ರಾಜ್ಯದ 6,000ಕ್ಕೂ ಹೆಚ್ಚು ಗ್ರಾಮ ಪಂಚಾಯತಿಗಳು ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಗ್ರಾಮ ಪಂಚಾಯತ್ ಕಚೇರಿಗಳು’ ಎಂದು ಹೆಸರು ನೀಡಬೇಕು ಎಂದು ಉಗ್ರಪ್ಪ ಮನವಿ ಮಾಡಿದ್ದಾರೆ.














