ಬೆಂಗಳೂರು: “ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿ, ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೆ ಸ್ವಂತ ಭಾಷಣವನ್ನು ಓದಿರುವ ರಾಜ್ಯಪಾಲರ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನವಾಗಿದೆ: ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
“ಸಂವಿಧಾನದ ಕಲಂ 176 ಮತ್ತು 163ರ ಪ್ರಕಾರ, ವರ್ಷದ ಮೊದಲ ಜಂಟಿ ಅಧಿವೇಶನ ಹಾಗೂ ಹೊಸ ಸರ್ಕಾರ ರಚನೆಯಾದ ಸಂದರ್ಭದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನೇ ಓದುವುದು ಕಡ್ಡಾಯ ಕರ್ತವ್ಯವಾಗಿದೆ. ಆದರೆ ಈ ಸಂವಿಧಾನಬದ್ಧ ನಿಯಮವನ್ನು ಉಲ್ಲಂಘಿಸಿ ರಾಜ್ಯಪಾಲರು ತಮ್ಮದೇ ಭಾಷಣವನ್ನು ಓದಿದ್ದಾರೆ” ಎಂದು ಸಿಎಂ ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯಪಾಲರ ಈ ನಡೆ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ. ಇದನ್ನು ನಮ್ಮ ಪಕ್ಷ ಮತ್ತು ಸರ್ಕಾರ ತೀವ್ರವಾಗಿ ಖಂಡಿಸುತ್ತವೆ. ಈ ವಿಚಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು” ಎಂದರು.
ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ)ಯನ್ನು ರದ್ದುಗೊಳಿಸಿ, ‘ವಿಬಿ-ಜಿ ರಾಮ್ ಜಿ’ ಎಂಬ ಹೊಸ ಕಾಯ್ದೆಯನ್ನು ಜಾರಿಗೆ ತಂದಿರುವುದಕ್ಕೂ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
“ಮನರೇಗಾ ಕಾಯ್ದೆ 2005ರಲ್ಲಿ ಜಾರಿಗೆ ಬಂದು, ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ಸಣ್ಣ ರೈತರಿಗೆ ಕನಿಷ್ಠ 100 ದಿನಗಳ ಉದ್ಯೋಗ ಭದ್ರತೆ ಒದಗಿಸಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಶೇ.53ರಷ್ಟು ಮಹಿಳೆಯರು ಮತ್ತು ಶೇ.28ರಷ್ಟು ದಲಿತರು ಸೇರಿರುವ ಕಾರ್ಮಿಕರಿಗೆ ಉದ್ಯೋಗದ ಖಾತ್ರಿ ಇಲ್ಲದೆ, ಕೆಲಸದ ಸ್ಥಳವನ್ನು ನಿರ್ಧರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರ ತನ್ನ ಕೈಗೆ ತೆಗೆದುಕೊಂಡಿದೆ” ಎಂದು ಸಿಎಂ ಆರೋಪಿಸಿದರು.
“ಹಿಂದಿನ ಕಾಯ್ದೆಯಲ್ಲಿ ಗ್ರಾಮಸಭೆ ಹಾಗೂ ಪಂಚಾಯತ್‌ಗಳಿಗೆ ಕ್ರಿಯಾಯೋಜನೆ ರೂಪಿಸುವ ಹಕ್ಕು ಇದ್ದು, ವರ್ಷಪೂರ್ತಿ ಕೆಲಸ ನೀಡುವುದು ಸರ್ಕಾರದ ಕರ್ತವ್ಯವಾಗಿತ್ತು. ಆದರೆ ಹೊಸ ಕಾಯ್ದೆಯಲ್ಲಿ ಈ ಎಲ್ಲಾ ಪ್ರಜಾಪ್ರಭುತ್ವಾತ್ಮಕ ವ್ಯವಸ್ಥೆಗಳನ್ನು ರದ್ದುಗೊಳಿಸಲಾಗಿದೆ” ಎಂದು ಅವರು ಹೇಳಿದರು.
“ರಾಜ್ಯಪಾಲರು ಕೇಂದ್ರ ಸರ್ಕಾರದ ನೀತಿಗಳನ್ನು ಉದ್ದೇಶಪೂರ್ವಕವಾಗಿ ಸಮರ್ಥಿಸಿಕೊಳ್ಳುತ್ತಿದ್ದಾರೆ. ಅವರಿಗೆ ಸ್ವತಂತ್ರವಾಗಿ ನಡೆದುಕೊಳ್ಳುವ ಅವಕಾಶವಿಲ್ಲದಂತೆ ವರ್ತಿಸುತ್ತಿದ್ದಾರೆ. ಆದರೆ ಆಡಳಿತ ಪಕ್ಷವಾಗಿ ನಮಗೆ ಈ ಕಾಯ್ದೆಯ ಬಗ್ಗೆ ಸ್ಪಷ್ಟ ವಿರೋಧವಿದೆ. ಈ ಅಂಶಗಳನ್ನು ಸಚಿವ ಸಂಪುಟದ ಭಾಷಣದಲ್ಲಿ ಸೇರಿಸಲಾಗಿತ್ತು. ಅದನ್ನೇ ಓದದಿರುವುದು ಗಂಭೀರ ಸಂವಿಧಾನ ಉಲ್ಲಂಘನೆ” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
“ಮನರೇಗಾ ಕಾಯ್ದೆಯನ್ನು ಮರುಸ್ಥಾಪಿಸುವುದು ಮತ್ತು ಹೊಸ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸುವುದು ನಮ್ಮ ಸರ್ಕಾರದ ದೃಢ ನಿರ್ಧಾರವಾಗಿದೆ. ಈ ಹಿಂದೆ ರೈತ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆದಂತೆ, ಈ ಕಾಯ್ದೆಯೂ ವಾಪಸ್ ಪಡೆಯುವವರೆಗೆ ಹೋರಾಟ ಮುಂದುವರಿಯಲಿದೆ” ಎಂದು ಅವರು ಎಚ್ಚರಿಸಿದರು.
“ರಾಜ್ಯಪಾಲರ ವಿರುದ್ಧ ಪಕ್ಷ, ಸರ್ಕಾರ, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದು, ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣದ ಪ್ರತಿಯನ್ನು ಎಲ್ಲ ಶಾಸಕರು ಹಾಗೂ ಎಂಎಲ್‌ಸಿಗಳಿಗೆ ವಿತರಿಸಲಾಗಿದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಕುರಿತೂ ಚರ್ಚೆ ನಡೆಯಲಿದೆ” ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.














