• ಡಿ.ಸಿ.ಪ್ರಕಾಶ್, ಸಂಪಾದಕರು
ಬೆಂಗಳೂರು ಕೆ.ಆರ್.ಪುರಂ ಪ್ರದೇಶದಲ್ಲಿ ಸ್ಥಾಪಿತವಾದ ಐಟಿಐ (ITI), ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ದೇಶದ ದೂರಸಂಪರ್ಕ ಉಪಕರಣಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಐಟಿಐ ಅನ್ನು 1948 ಅಕ್ಟೋಬರ್ 12 ರಂದು ಬೆಂಗಳೂರಿನಲ್ಲಿ ಮೊದಲನೆಯ Departmental Factory ಯಾಗಿ ಸ್ಥಾಪಿಸಲಾಯಿತು. ನಂತರ 1950 ಜನವರಿ 25 ರಂದು ಅಧಿಕೃತವಾಗಿ Public Sector Undertaking (PSU) ಆಗಿ Indian Telephone Industries Ltd ಎಂಬ ಆಧಿಕೃತ ಹೆಸರನ್ನು ಪಡೆದುಕೊಂಡಿತು. ಇದು ಸ್ವಾತಂತ್ರ್ಯ ನಂತರದ ಭಾರತದ ಮೊದಲ PSU ಗಳಲ್ಲಿ ಒಂದಾಗಿದೆ.
ಐಟಿಐ ಲಿಮಿಟೆಡ್ ದೇಶದ ದೂರಸಂಪರ್ಕ ವ್ಯವಸ್ಥೆಗೆ ಅಗತ್ಯವಾದ ಫೋನ್ ವಿನ್ಯಾಸಗಳು, ಸ್ವಿಚಿಂಗ್ ಮತ್ತು ಪ್ರಸರಣ (Switching & Transmission) ಉಪಕರಣಗಳನ್ನು ಸ್ಥಳೀಯವಾಗಿ ತಯಾರಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ಮೂಲಕ ಭಾರತವು ವಿದೇಶಿ ಆಮದು (Import-Reliance) ಕಡಿಮೆ ಮಾಡಿ ಸ್ವಂತ ತಂತ್ರಜ್ಞಾನ ಅಭಿವೃದ್ಧಿ ಕಡೆಗೆ ಮುನ್ನಡೆಸಿತು. ಕಾಲಕ್ರಮದಲ್ಲಿ ಐಟಿಐ ತನ್ನ ಉತ್ಪಾದನಾ ಶಕ್ತಿಯನ್ನು ಭಾರತದೆಲ್ಲಡೆ ವಿಸ್ತರಿಸಿತು.
ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದ ಐಟಿಐ, ಉತ್ತರ ಪ್ರದೇಶದ ನೈನಿ, ಮಂಕಾಪುರ, ರಾಯ್‌ಬರೇಲಿ ಕೇರಳದ ಪಾಲಕ್ಕಾಡ್, ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಘಟಕಗಳನ್ನು ಪ್ರಾರಂಭಿಸಿ, ವಿವಿಧ ದೂರಸಂಪರ್ಕ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ತಯಾರಿಸಿತು.
ಐಟಿಐ ಕಾಲಕ್ರಮದಲ್ಲಿ ತಂತ್ರಜ್ಞಾನ-ನಿರ್ಮಾಣದ ವ್ಯಾಪ್ತಿಯನ್ನು ವಿಸ್ತರಿಸಿ GSM Based Mobile Network Equipment, Smart Cards, Optical Fiber Cables, ICT (Internet and network equipment), Encryption and Defence Communication Systems, Smart City & Allied Solutions ಮುಂತಾದವುಗಳನ್ನು ತಯಾರಿಸಿ, ಭಾರತೀಯ ದೂರಸಂಪರ್ಕ ಕ್ಷೇತ್ರ ಮತ್ತು ಸುರಕ್ಷಿತ ಸಂವಹನ ವ್ಯವಸ್ಥೆಗಳಲ್ಲಿ ದೇಶಕ್ಕೆ ಮಹತ್ವದ ಕೊಡುಗೆ ನೀಡಿತು. ಈ ಎಲ್ಲಾ ಹಂತಗಳಿಂದ ಐಟಿಐ ಲಿಮಿಟೆಡ್ ಭಾರತದ ಟೆಲಿಕಾಂ ಕ್ಷೇತ್ರದ ಪ್ರಮುಖ ಇಂಜಿನಿಯರಿಂಗ್ ಸಂಸ್ಥೆಯಲ್ಲಿ ಮತ್ತು ಬಹುಶಃ ದೇಶದ ಅತ್ಯಂತ ಹಳೆಯ PSU ಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಐಟಿಐಗೆ ಇತಿಹಾಸದಲ್ಲಿ ಹಲವು ಸವಾಲುಗಳು ಎದುರಾಗಿದ್ದರೂ ಸಹ, ಸರ್ಕಾರದ ಮಿತಿತಾಣದ ಅಡಿಯಲ್ಲಿ ಕೆಲಸ ಮಾಡಿದೆ. ಪ್ರಾಜೆಕ್ಟ್ ಆರ್ಡರ್‍ಗಳು, ಉದ್ಯೋಗಿಗಳ ಹಕ್ಕುಗಳು ಇವುಗಳ ನಡುವೆ ಸಂಸ್ಥೆ ತನ್ನ ನಿರ್ವಹಣಾ ಕಾರ್ಯಗಳನ್ನೂ ಮುಂದುವರೆಸಿದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಸಂಸ್ಥೆ ಸಾಲದ ಭಾರ, ನಷ್ಟದ ವ್ಯವಹಾರ, ವೇತನ ಮತ್ತು ಪಿಂಚಣಿ ಬಾಕಿ ಸಮಸ್ಯೆಗಳನ್ನು ಎದುರಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆ.ಆರ್.ಪುರಂ ವ್ಯಾಪ್ತಿಯಲ್ಲಿನ ಐಟಿಐ, ತನ್ನ ಬಳಿಯಿರುವ 91.43 ಎಕರೆ ಭೂಮಿಯನ್ನು ಸುಮಾರು ರೂ.3,473.14 ಕೋಟಿಗಳಿಗೆ Monetise (ಮಾರಾಟ, ಲೀಸ್ / ಅಭಿವೃದ್ಧಿ ಮೂಲಕ ಆದಾಯ ಪಡೆಯುವಿಕೆ) ಮಾಡುವ ಮೂಲಕ ಹಣ ಸಂಗ್ರಹಿಸಿ, ಬ್ಯಾಂಕ್ ಸಾಲ ತೀರಿಸಲು, ಉದ್ಯೋಗಿಗಳ ಬಾಕಿ ವೇತನ ಮತ್ತು ಪಿಂಚಣಿಯನ್ನು ಪಾವತಿಸಲು ಯೋಜನೆ ರೂಪಿಸಿಕೊಂಡಿದೆ. ಇದನ್ನು ಐಟಿಐ ಲಿಮಿಟೆಡ್ ವರದಿ ಮೇರೆಗೆ ಕೇಂದ್ರ ಸಂವಹನ ಸಚಿವಾಲಯದ ಪ್ರತಿಕ್ರಿಯೆಯಲ್ಲಿ ತಿಳಿಸಲಾಗಿದೆ.
ಯೋಜನೆಯ ನಿಖರ ಅಂಶಗಳು:
ಈ ಹಣಮಾಡಿಕೊಳ್ಳುವಿಕೆ (Monetisation) ಯೋಜನೆಯು ಒಟ್ಟು 91.43 ಎಕರೆ ವಿಸ್ತೀರ್ಣದ ಭೂಮಿಯನ್ನು ಒಳಗೊಂಡಿದೆ. ಈ ಭೂಮಿಯು ಹುಬ್ಬಳ್ಳಿ, ಬೆಳಗಾವಿ ಮಾರ್ಗದ ವಿವಿಧ ಸ್ಥಳಗಳಲ್ಲಿ ಸಣ್ಣ ಸಣ್ಣ ಭಾಗಗಳಾಗಿ ಹರಡಿಕೊಂಡಿದ್ದರೂ, ಪ್ರಮುಖವಾದ ಭೂಮಿ ಪ್ರಸ್ತುತ ಕೆ.ಆರ್.ಪುರ ಐಟಿಐ ಟೌನ್‌ಶಿಪ್ ಪ್ರದೇಶದಲ್ಲಿದೆ.
ಮಾಹಿತಿಯ ಪ್ರಕಾರ:
44.03 ಎಕರೆ ಭೂಮಿ ರೂ.1,651.20 ಕೋಟಿ
21 ಎಕರೆ ಭೂಮಿ ರೂ.823.20 ಕೋಟಿ
10.28 ಭೂಮಿ ರೂ.357.57 ಕೋಟಿ
16.12 ಎಕರೆ ಭೂಮಿ ರೂ.641.17 ಕೋಟಿ ಎಂದು ಅಂದಾಜಿಸಲಾಗಿದೆ. ಒಟ್ಟು ರೂ.3,473.14 ಕೋಟಿಗಳು.
ಐಟಿಐ ಕಾರ್ಮಿಕರ ಆತಂಕ:ಕೇಂದ್ರ ಸರ್ಕಾರದ ಅಧೀನದಲ್ಲಿರುವ ಐಟಿಐ ಲಿಮಿಟೆಡ್ ತನ್ನ ಬಳಿ ಇರುವ ಸುಮಾರು 91.43 ಎಕರೆ ಮೌಲ್ಯಯುತ ಭೂಮಿಯನ್ನು Monetisation ಮಾಡುವ ಯೋಜನೆ ರೂಪಿಸಿಕೊಂಡಿರುವ ಸುದ್ದಿ ಹೊರಬಿದ್ದ ನಂತರ, ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಕಾರ್ಮಿಕರು ಮತ್ತು ನಿವೃತ್ತ ಉದ್ಯೋಗಿಗಳಲ್ಲಿ ಆತಂಕ, ಅಸಮಾಧಾನ ಮತ್ತು ಭಯ ಮನೆಮಾಡಿದೆ.
ಉದ್ಯೋಗ ಭದ್ರತೆ ಬಗ್ಗೆ ಆತಂಕ:
ಐಟಿಐಯಲ್ಲಿ ಕೆಲಸ ಮಾಡುತ್ತಿರುವ ಶಾಶ್ವತ ಹಾಗೂ ಗುತ್ತಿಗೆ ಕಾರ್ಮಿಕರಲ್ಲಿ ಆತಂಕ ಶುರುವಾಗಿದೆ. ಭೂಮಿ ಮಾರಾಟವಾದರೆ ಕಾರ್ಖಾನೆಗಳು ಸ್ಥಳಾಂತರವಾಗುತ್ತದೆಯೇ? ಕೆಲಸ ಕಡಿತ (VRS / Retrenchment) ಆಗುತ್ತದೆಯೇ? ಎಂಬ ಪ್ರಶ್ನೆಗಳು ಕಾರ್ಮಿಕ ಸಂಘಟನೆಗಳಿಂದ ಕಾಳಿಬರುತ್ತಿದೆ.
ಕಾರ್ಮಿಕ ಸಂಘಟನೆಗಳ ವಿರೋಧ:
“ಲಾಭದ ಭೂಮಿಯನ್ನು ಮಾರಾಟ ಮಾಡಿ, ಕಾರ್ಮಿಕರ ಭವಿಷ್ಯ ಅಪಾಯಕ್ಕೆ ಒಡ್ಡಲಾಗುತ್ತಿದೆ” ಎಂದು ಆರೋಪಿಸಲಾಗುತ್ತಿದೆ. “ಐಟಿಐ ಭೂಮಿ ಸರ್ಕಾರದ ಆಸ್ತಿ ಆಗಿರಬಹುದು. ಆದರೆ, ಐಟಿಐ ನಮ್ಮ ಬದುಕಿನ ಆಸ್ತಿಯಾಗಿದೆ. ಅದನ್ನು ಕೇವಲ ಹಣದ ಲೆಕ್ಕದಲ್ಲಿ ತೀರ್ಮಾನಿಸಬಾರದು. ಖಾಸಗೀಕರಣದಿಂದ ಉದ್ಯೋಗ ನಾಶ ಮತ್ತು ತಂತ್ರಜ್ಞಾನ ಅವಲಂಬನೆ ಆಗುತ್ತದೆ. ಭೂಮಿ ಮಾರಾಟದಿಂದ ಶಾಶ್ವತ ಪರಿಹಾರ ಆಗುವುದಿಲ್ಲ. ಪುನಶ್ಚೇತನ ಮಾಡುವುದೊಂದೆ ಪರ್ಯಾಯ. ಹೊಸ
ಉತ್ಪಾದನಾ ಘಟಕಗಳು ಮತ್ತು ಸರ್ಕಾರಿ ಆರ್ಡರ್‌ಗಳನ್ನು ನೀಡಬೇಕು. ದೇಶದ ದೂರಸಂಪರ್ಕ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಐಟಿಐಗೆ ಹೊಸ ಪಾತ್ರ ನೀಡಬೇಕು” ಎಂಬುದು ಕಾರ್ಮಿಕರ ಬೇಡಿಕೆಯಾಗಿದೆ.
“ನಾವು ಸಂಬಳವಿಲ್ಲದೆ ಕೆಲಸ ಮಾಡಿದ ದಿನಗಳಿವೆ. ಪಿಂಚಣಿ ಬಾಕಿಗಾಗಿ ಕಚೇರಿಗಳ ಮೆಟ್ಟಿಲು ಏರಿಳಿದಿದ್ದೇವೆ. ಈಗ ಭೂಮಿಯನ್ನು ಮಾರಾಟ ಮಾಡಿ ಸಾಲ ತೀರಿಸುತ್ತೇವೆ ಎನ್ನುವುದು ಸುಲಭದ ಮಾತು. ಆಮೇಲೆ ಐಟಿಐಯಲ್ಲಿ ಕೆಲಸವೇ ಇರದಿದ್ದರೆ ನಮ್ಮ ಬದುಕು ಏನು?” ಇದು ITI ಕಾರ್ಮಿಕ ಸಂಘದ ಪ್ರತಿನಿಧಿಯ ಮಾತು.
“ನಾವು ಈ ಸಂಸ್ಥೆಗೆ ಜೀವನ ಕೊಟ್ಟಿದ್ದೇವೆ. ಇಂದು ಸಂಸ್ಥೆಯ ಭೂಮಿಯನ್ನು ಮಾರಾಟ ಮಾಡುವ ಹೆಸರಿನಲ್ಲಿ ನಮ್ಮ ಬದುಕನ್ನೇ ಅಂಚಿಗೆ ತಳ್ಳಲಾಗುತ್ತಿದೆ.” ಇದು ಐಟಿಐ ಕಾರ್ಮಿಕರ ಮನದಾಳದ ನೋವು.
ಸಾಲ ತೀರಿಸಲು ಭೂಮಿ ಮಾರಾಟವಾದರೆ ಕಾರ್ಮಿಕರ ಭವಿಷ್ಯ ಏನು? ಕಾರ್ಮಿಕ ಸಂಘಟನೆಗಳ ಪ್ರಕಾರ, ಐಟಿಐ ಸಂಸ್ಥೆಯ ಆರ್ಥಿಕ ಸಂಕಷ್ಟಕ್ಕೆ ಕಾರಣ ಕಾರ್ಮಿಕರು ಅಲ್ಲ; ಬದಲಾಗಿ ವರ್ಷಗಳ ಕಾಲ ನಡೆದ ಆಡಳಿತ ವೈಫಲ್ಯ, ಯೋಜನಾ ಕೊರತೆ ಮತ್ತು ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.
ನಗರ ಅಭಿವೃದ್ಧಿ ಮತ್ತು ಸಾರ್ವಜನಿಕ ಹಿತಾಸಕ್ತಿ ಪ್ರಶ್ನೆಗಳು:
ಬೆಂಗಳೂರಿನ ಪ್ರಮುಖ ಪ್ರದೇಶದಲ್ಲಿರುವ ಈ ಭೂಮಿ ಭವಿಷ್ಯದಲ್ಲಿ ವಾಣಿಜ್ಯ, ವಸತಿ, ಐಟಿ ಯೋಜನೆಗಳಿಗೆ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಸಂಚಾರ ಸಮಸ್ಯೆ ಎದುರಾಗುತ್ತವೆ. ಮುಖ್ಯವಾಗಿ, ಹಸಿರು ಪ್ರದೇಶ ಕಡಿಮೆಯಾಗುತ್ತವೆ ಎಂಬ ಪ್ರಶ್ನೆಗಳು ನಾಗರಿಕ ವಲಯದಿಂದ ಕೇಳಿಬರುತ್ತಿವೆ.
ಸಾರ್ವಜನಿಕ ಆಸ್ತಿಯ ಭವಿಷ್ಯ, ಕಾರ್ಮಿಕರ ಹಕ್ಕುಗಳು ಮತ್ತು ಸರ್ಕಾರದ ಆರ್ಥಿಕ ನೀತಿ – ಈ ಮುರು ವಿಷಯಗಳ ನಡುವಿನ ಸಂಘರ್ಷವೇ ಐಟಿಐ ಭೂಮಿ ವಿಚಾರದ ಕೇಂದ್ರಬಿಂದುವಾಗಿದೆ.
ಮೊದಲು ಭಾಗಶಃ Monetise ಮಾಡುತ್ತಾರೆ. ನಂತರ, ಸಂಪೂರ್ಣ ವಿಲೇವಾರಿಯಾಗುತ್ತದೆ. ಕೊನೆಗೆ ಸಂಸ್ಥೆಯ ಅಸ್ತಿತ್ವವೇ ಇರುವುದಿಲ್ಲ. BSNL, MTNL, ITI ಎಲ್ಲವೂ ಒಂದೇ ದಾರಿಗೆ ಹೋಗುತ್ತಿದೆ. ನಷ್ಟಕ್ಕೆ ಪರಿಹಾರವಾಗಿ ಅಸ್ತಿ ಮಾರಾಟ ಮಾಡಲಾಗುತ್ತಿದೆ. ಆದರೆ, ನಷ್ಟಕ್ಕೆ ಕಾರಣವಾದವದರು ಯಾರು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಈ ಪ್ರಕ್ರಿಯೆಯಲ್ಲಿ National Land Monetisation Corporation (NLMC) ಭಾಗಿಯಾಗುವ ಸಾಧ್ಯತೆ ಇದೆ.
ಹಾಗಾಗಿ, ಬ್ಯಾಂಕ್ ಸಾಲ ತೀರಿಸಬೇಕು.. ಉದ್ಯೋಗಿಗಳಿಗೆ ಬಾಕಿ ವೇತನ ನೀಡಬೇಕು.. ಪಿಂಚಣಿಯನ್ನು ಪಾವತಿಸಲು ಹಣ ಬೇಕು.. ಎಂಬ ನೆಪದಲ್ಲಿ, 91.43 ಎಕರೆ ಐಟಿಐ ಭೂಮಿಯನ್ನು ಸುಮಾರು ರೂ.3,473.14 ಕೋಟಿಗಳಿಗೆ Monetise ಮಾಡಲು ಮುಂದಾಗಿರುವ ಐಟಿಐ ಮತ್ತು ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ತಡೆಯಲು ಮತ್ತು ಪ್ರಸ್ತುತ ಐಟಿಐಯಲ್ಲಿ ಕೆಲಸ ಮಾಡುತ್ತಿರುವ ಶಾಶ್ವತ ಹಾಗೂ ಗುತ್ತಿಗೆ ಕಾರ್ಮಿಕರಿಗೆ ಪಾವತಿಸಬೇಕಾದ ಬಾಕಿ ವೇತನ, ಪಿಂಚಣಿ ಹಾಗೂ ಇತ್ಯಾದಿಗಳನ್ನು ಕೂಡಲೇ ಒದಗಿಸುವಂತೆ ಐಟಿಐ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಜನ ಸಂಘಟನೆ ಮಾಡುವುದಾಗಿ “ಐಟಿಐ ಖಾಸಗೀಕರಣ ವಿರೋಧಿ ಜನ ಆಂದೋಲನ” ಸಂಘಟನೆ ಎಚ್ಚರಿಕೆ ನೀಡಿದೆ.
“ದೇಶದಲ್ಲಿರುವ ಎಲ್ಲಾ ಸಾರ್ವಜನಿಕ ವಲಯಗಳನ್ನು ಖಾಸಗೀಕರಣಗೊಳಿಸಿ ಭೂಮಿಗಳನ್ನು ಮಾರಟ ಮಾಡಲು ಬೆಂಗಳೂರಿನ ಐಟಿಐ ಒಂದು ಸಣ್ಣ ಪ್ರಯೋಗವಾಗಿದೆ. ಹಾಗಾಗಿ ಐಟಿಐ ಉಳಿಸುವುದು ಅನನಿವಾರ್ಯ ಮಾತ್ರವಲ್ಲ ಅದರಲ್ಲಿ ನಮ್ಮ ತಲೆಮಾರಿನ ಭವಿಷ್ಯವೂ ಅಡಗಿದೆ” ಎಂದು “ಐಟಿಐ ಖಾಸಗೀಕರಣ ವಿರೋಧಿ ಜನ ಆಂದೋಲನ” ಹೇಳಿಕೊಂಡಿದೆ.














