ಬೆಂಗಳೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNAREGA) ಯಿಂದ ಮಹಾತ್ಮ ಗಾಂಧಿಯವರ ಹೆಸರನ್ನು ಕೈಬಿಟ್ಟು ಜಾರಿಗೆ ತರಲು ಉದ್ದೇಶಿಸಿರುವ ‘ವಿಕಸಿತ ಭಾರತ–ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) (ವಿಬಿ–ಜಿ ರಾಮ್ ಜಿ)’ ಕಾಯ್ದೆಯನ್ನು ತಕ್ಷಣ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳವಾರ ಪತ್ರ ಬರೆದಿದ್ದಾರೆ.
ಈ ಹೊಸ ಕಾಯ್ದೆ ಮೂಲತಃ ದೇಶದ ಉದ್ಯೋಗ ಖಾತರಿ ವ್ಯವಸ್ಥೆಯನ್ನೂ, ಸಂವಿಧಾನಾತ್ಮಕ ಸಹಕಾರಿ ಒಕ್ಕೂಟದ ತತ್ವವನ್ನೂ ದುರ್ಬಲಗೊಳಿಸುವಂತಿದೆ ಎಂದು ಸಿಎಂ ಎಚ್ಚರಿಸಿದ್ದಾರೆ. ಪ್ರಧಾನಿ ಅವರಿಗೆ ಬರೆದ ವಿವರವಾದ ಪತ್ರದಲ್ಲಿ, ಮನರೇಗಾ ರದ್ದತಿ ಅಥವಾ ಪರಿಷ್ಕರಣೆಯ ಪ್ರಯತ್ನಗಳು ಗ್ರಾಮೀಣ ಕುಟುಂಬಗಳ ಜೀವನೋಪಾಯದ ಹಕ್ಕಿಗೆ ಗಂಭೀರ ಹೊಡೆತ ನೀಡುತ್ತವೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹೊಸ ಕಾಯ್ದೆಯು ಸಂವಿಧಾನದ 258 ಮತ್ತು 250ನೇ ವಿಧಿಗಳ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರಗಳೊಂದಿಗೆ ಯಾವುದೇ ಸಮರ್ಪಕ ಸಮಾಲೋಚನೆ ನಡೆಸದೇ ಜಾರಿಗೆ ತರಲಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇಂತಹ ಏಕಪಕ್ಷೀಯ ಕ್ರಮಗಳು ಸಹಕಾರಿ ಒಕ್ಕೂಟದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದ್ದು, ರಾಜ್ಯಗಳ ಸ್ವಾಯತ್ತತೆಯನ್ನು ಕುಗ್ಗಿಸುವ ಅಪಾಯವಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೆ ಮನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಶೇ.90 ಮತ್ತು ರಾಜ್ಯ ಸರ್ಕಾರಗಳು ಶೇ.10 ವೆಚ್ಚ ಭರಿಸುತ್ತಿದ್ದರೆ, ಹೊಸ ಕಾಯ್ದೆಯಲ್ಲಿ ಇದನ್ನು ಬಹುತೇಕ ರಾಜ್ಯಗಳಿಗೆ 60:40 ಅನುಪಾತಕ್ಕೆ ಬದಲಾಯಿಸಲಾಗಿದೆ. ಇದು ಜಿಎಸ್ಟಿ ಪರಿಹಾರದ ಕೊರತೆ ಹಾಗೂ ಅನ್ಯಾಯಕರ ಹಣಕಾಸು ಹಂಚಿಕೆಯಿಂದ ಈಗಾಗಲೇ ಆರ್ಥಿಕ ಒತ್ತಡದಲ್ಲಿರುವ ರಾಜ್ಯಗಳ ಮೇಲೆ ಹೆಚ್ಚುವರಿ ಭಾರವನ್ನು ಹಾಕಲಿದೆ ಎಂದು ಸಿಎಂ ಹೇಳಿದ್ದಾರೆ. ಈ ಬದಲಾವಣೆಗಳನ್ನೂ ರಾಜ್ಯಗಳೊಂದಿಗೆ ಅರ್ಥಪೂರ್ಣ ಚರ್ಚೆ ಇಲ್ಲದೆ ಜಾರಿಗೊಳಿಸಲಾಗಿದೆ ಎಂದು ಅವರು ಟೀಕಿಸಿದ್ದಾರೆ.
ಉದ್ಯೋಗ ಖಾತರಿ ಕಾಯ್ದೆ ಕೇವಲ ಕಲ್ಯಾಣ ಯೋಜನೆಯಷ್ಟೇ ಅಲ್ಲ; ಅದು ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಮಹಾತ್ಮ ಗಾಂಧಿಯವರ ಹೆಸರಿನೊಂದಿಗೆ ಜೋಡಿಸಲ್ಪಟ್ಟ ಐತಿಹಾಸಿಕ ಹಾಗೂ ಜಾಗತಿಕವಾಗಿ ಪ್ರಶಂಸಿತ ಹಕ್ಕು ಆಧಾರಿತ ಕಾನೂನು ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಇಂತಹ ಕಾಯ್ದೆಯಿಂದ ಗಾಂಧೀಜಿ ಹೆಸರನ್ನು ತೆಗೆದುಹಾಕುವುದು ತಪ್ಪು ಸಂದೇಶವನ್ನು ನೀಡುವುದರೊಂದಿಗೆ ಅದರ ನೈತಿಕ ಶಕ್ತಿಯನ್ನು ಕುಂದಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದ್ದರಿಂದ ಸಹಕಾರಿ ಒಕ್ಕೂಟ ಮತ್ತು ಗ್ರಾಮೀಣ ಜನರ ಹಿತಾಸಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ‘ವಿಬಿ–ಜಿ ರಾಮ್ ಜಿ’ ಕಾಯ್ದೆಯನ್ನು ಜಾರಿಗೆ ತರದೇ ಸ್ಥಗಿತಗೊಳಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿಗೆ ಮನವಿ ಮಾಡಿದ್ದಾರೆ.














