ಚೆನ್ನೈ: “ನಟ ಶಿವರಾಜ್ ಕುಮಾರ್ ಅವರು ‘45’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಆರೋಗ್ಯ ಸಮಸ್ಯೆಗಳು, ಚಿಕಿತ್ಸೆ ಬಳಿಕದ ಅನುಭವಗಳು ಹಾಗೂ ಸಹೋದರ ಪುನೀತ್ ರಾಜ್ ಕುಮಾರ್ ಅವರ ನಿಧನ ಕುರಿತು ಮನಕಲಕುವಂತೆ ಮಾತನಾಡಿದರು.
ಶಿವರಾಜ್ ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅಭಿನಯದ ‘45’ ಚಿತ್ರವು ಡಿಸೆಂಬರ್ 25 ರಂದು ಕನ್ನಡದಲ್ಲಿ ಹಾಗೂ ಜನವರಿ 1ರಂದು ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ಇತ್ತೀಚೆಗೆ ತಾನು ಎದುರಿಸಿದ ಆರೋಗ್ಯ ಸಮಸ್ಯೆಗಳು ಮತ್ತು ಚಿಕಿತ್ಸೆ ಕುರಿತು ತಮ್ಮ ಮನದಾಳದ ನೋವನ್ನು ಹಂಚಿಕೊಂಡರು.
“ಚಿಕಿತ್ಸೆಗೆ ಹೋಗುವಾಗ ನಾನು ಮತ್ತೆ ಹಿಂದಿರುಗುತ್ತೇನೆ ಎಂಬ ಭರವಸೆ ನನಗೇ ಇರಲಿಲ್ಲ. ವೈದ್ಯರು ದೇವರಂತೆ ನನ್ನನ್ನು ಮರುಜೀವಕ್ಕೆ ತಂದರು” ಎಂದು ಭಾವುಕರಾಗಿ ಹೇಳಿದರು. ಡಿಸೆಂಬರ್ 18 ರಂದು ಚಿಕಿತ್ಸೆಗಾಗಿ ದೇಶ ಬಿಟ್ಟಾಗ ತುಂಬಾ ಭಾವೋದ್ರೇಕಗೊಂಡಿದ್ದೆ. ಮಾಧ್ಯಮದ ಸ್ನೇಹಿತರು ಕೂಡ ಕಣ್ಣೀರಿಟ್ಟರು. ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆ ನಡೆಯಿತು. ಐದು-ಆರು ಗಂಟೆಗಳ ನಂತರ ಕಣ್ಣು ತೆರೆದಾಗ ಪತ್ನಿ ನನ್ನ ಕೈ ಹಿಡಿದುಕೊಂಡಿದ್ದರು. ಆ ಕ್ಷಣವೇ ನನಗೆ ಹೊಸ ಜೀವನ ದೊರೆತಂತಾಯಿತು. ಭಾರತಕ್ಕೆ ಮರಳಿದಾಗಲೂ ತುಂಬಾ ಭಾವುಕನಾಗಿದ್ದೆ. ಯಾರಾದರೂ ಆರೋಗ್ಯ ವಿಚಾರಿಸಲು ಕರೆ ಮಾಡಿದರೂ ಕಣ್ಣೀರು ಬರುತ್ತಿತ್ತು” ಎಂದು ವಿವರಿಸಿದರು.
‘45’ ಚಿತ್ರದಲ್ಲಿ ಮಹಿಳಾ ವೇಷದಲ್ಲಿ ಕಾಣಿಸಿಕೊಂಡಿರುವ ಬಗ್ಗೆ ಮಾತನಾಡಿದ ಅವರು, “ಆ ವೇಷದಲ್ಲಿ ನನ್ನ ಪತ್ನಿಯ ಕೈ ಹಿಡಿದು ಸೆಟ್‌ಗೆ ಹೋಗಿದ್ದೆ. ಎಲ್ಲರೂ ಯಾರು ಈ ಇಬ್ಬರು ಮಹಿಳೆಯರು ಎಂದು ಅಚ್ಚರಿಯಿಂದ ನೋಡುತ್ತಿದ್ದರು. ನನ್ನ ಪತ್ನಿಗೆ ಅದನ್ನು ನೋಡಿದಾಗ ತುಂಬಾ ಸಂತೋಷವಾಯಿತು” ಎಂದರು.

ನೇರ ತಮಿಳು ಚಿತ್ರದಲ್ಲಿ ನಟಿಸುವ ಕುರಿತು ಪ್ರಶ್ನೆಗೆ, “ಒಂದು ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಶೀಘ್ರದಲ್ಲೇ ಅದು ಪ್ರಾರಂಭವಾಗಲಿದೆ” ಎಂದು ಉತ್ತರಿಸಿದರು. ತಮ್ಮ ಕನ್ನಡ ಚಿತ್ರದಲ್ಲಿ ರಜನಿಕಾಂತ್ ಅವರನ್ನು ನಟಿಸಲು ಆಹ್ವಾನಿಸುವ ಯೋಚನೆಯಿದೆಯೇ ಎಂಬ ಪ್ರಶ್ನೆಗೆ, “ಕೇವಲ ಅವಕಾಶವಿದೆ ಎಂದು ಮಾಡಬಾರದು. ಅಂಥದ್ದಕ್ಕೆ ತಕ್ಕ ಕಥೆ ಬರಬೇಕು. ಹಾಗೊಂದು ಅವಕಾಶ ಬಂದರೆ ಖಂಡಿತ ರಜನಿಕಾಂತ್ ಸರ್ ಅವರನ್ನು ಕೇಳುತ್ತೇನೆ” ಎಂದರು.
ರಾಜಕೀಯ ಪ್ರವೇಶದ ಕುರಿತು ಕೇಳಿದಾಗ, “ನನಗೆ ರಾಜಕೀಯದ ಅರಿವು ಇಲ್ಲ. ಜನರಿಗೆ ಸಹಾಯ ಮಾಡಲು ಅಧಿಕಾರವೇ ಬೇಕೆಂದಿಲ್ಲ. ಆದರೆ ರಾಜಕೀಯ ವ್ಯವಸ್ಥೆ ಹಾಗಿಲ್ಲ” ಎಂದು ಸ್ಪಷ್ಟಪಡಿಸಿದರು.
ಸಹೋದರ ಪುನೀತ್ ರಾಜ್ ಕುಮಾರ್ ಅವರ ನಿಧನ ಕುರಿತು ಮಾತನಾಡಿದ ಶಿವರಾಜ್ ಕುಮಾರ್, “ಅವನಿಗೆ ಆಗ ಕೇವಲ 46 ವರ್ಷ. ಜೀವನದಲ್ಲಿ ಎಲ್ಲವನ್ನೂ ಸ್ವೀಕರಿಸಲೇಬೇಕು. ಕೆಲವರು 20 ವರ್ಷದಲ್ಲೇ ಇಹಲೋಕ ತ್ಯಜಿಸುತ್ತಾರೆ. ಸಮಯ ಬಂದರೆ ಹೋಗಲೇಬೇಕು. ಪುನೀತ್ ಚಿಕ್ಕವಯಸ್ಸಿನಿಂದಲೇ ತಾಯಿ-ತಂದೆಗಳಿಗೆ ತುಂಬಾ ಹತ್ತಿರವಾಗಿದ್ದ. ಬಹುಶಃ ಅವರಿಗೇ ಅವನು ಹೆಚ್ಚು ಅಗತ್ಯವಾಗಿದ್ದರಿಂದ ದೇವರು ಕರೆದುಕೊಂಡಿರಬಹುದು” ಎಂದು ಹೇಳಿದರು.
“ಹಣವನ್ನು ಸಂಪಾದಿಸಬಹುದು, ಆದರೆ ಜನರ ಪ್ರೀತಿ-ವಿಶ್ವಾಸವನ್ನು ಸಂಪಾದಿಸಲು ಸಾಧ್ಯವಿಲ್ಲ. ಜೋಗಿ ಪಾತ್ರದಲ್ಲಿ ನಟಿಸಿದ ನನಗೆ ಎಲ್ಲರೂ ಅಪಾರ ಪ್ರೀತಿ ನೀಡಿದ್ದಾರೆ. ಅದನ್ನು ನನ್ನ ಹೃದಯದಲ್ಲಿ ಸದಾ ಇಟ್ಟುಕೊಂಡಿದ್ದೇನೆ” ಎಂದು ಕೃತಜ್ಞತೆ ಸಲ್ಲಿಸಿದರು.














